×
Ad

ವಿತ್ತೀಯ ಕೊರತೆ 9.5 ಶೇ: ಕೇಂದ್ರದ ಅಂದಾಜು

Update: 2021-02-01 23:06 IST

ಹೊಸದಿಲ್ಲಿ, ಫೆ.1: ಈ ವರ್ಷದ ವಿತ್ತೀಯ ಕೊರತೆ ಜಿಡಿಪಿಯ 9.5 ಶೇ ಮತ್ತು ಮುಂದಿನ ಆರ್ಥಿಕ ವರ್ಷದ ವಿತ್ತೀಯ ಕೊರತೆ 6.8 ಶೇ ಎಂದು ಅಂದಾಜಿಸಲಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿತ್ತೀಯ ಕೊರತೆ ಎಂದರೆ ಕೇಂದ್ರ ಸರಕಾರದ ಒಟ್ಟು ವೆಚ್ಚ ಮತ್ತು ಒಟ್ಟು ಆದಾಯದ ನಡುವಿನ ವ್ಯತ್ಯಾಸ. ಕಳೆದ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ 2021ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆ 3.5 ಶೇ ಎಂದು ಕೇಂದ್ರ ಸರಕಾರ ಅಂದಾಜಿಸಿತ್ತು. ವಿತ್ತೀಯ ಕೊರತೆಯನ್ನು ಸಾಲ ಪಡೆಯುವುದು, ಬಹುರಾಷ್ಟ್ರೀಯ ಹೂಡಿಕೆ ನಿಧಿ ಹಾಗೂ ಕಿರು ಅವಧಿಯ ಸಾಲಗಳಿಂದ ಭರ್ತಿ ಮಾಡಲು ಕ್ರಮ ಕೈಗೊಂಡಿದ್ದು ಇನ್ನೂ 80,000 ಕೋಟಿ ರೂ. ಕೊರತೆಯಿದೆ. ಇದನ್ನು ಭರ್ತಿ ಮಾಡಲು ಮುಂದಿನ 2 ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. 2021-22ರಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸರಕಾರದ ಒಟ್ಟು ಸಾಲ 12 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತೆರಿಗೆ ಆದಾಯ ಹೆಚ್ಚಳ, ಇದುವರೆಗೆ ಬಳಕೆಯಾಗದ ಸಾರ್ವಜನಿಕ ಆಸ್ತಿಗಳ ಮೌಲ್ಯವರ್ಧನೆ ಮಾಡುವ ಮೂಲಕ ಆದಾಯ ಹೆಚ್ಚಿಸುವುದು ಮುಂತಾದ ಕ್ರಮಗಳಿಂದ ಸರಕಾರದ ಆದಾಯ ಹೆಚ್ಚಿಸಲು ಯೋಚಿಸಲಾಗಿದೆ. ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಈಗಿರುವ 49 ಶೇ ದಿಂದ 74 ಶೇಕ್ಕೇರಿಸುವ ಪ್ರಸ್ತಾವನೆಯನ್ನು ವಿತ್ತ ಇಲಾಖೆ ಮಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News