ಟಿಆರ್‌ಎಸ್ ಶಾಸಕನ ನಿವಾಸದ ಮೇಲೆ ದಾಳಿ: 53 ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2021-02-01 17:53 GMT

ಹೈದರಾಬಾದ್, ಫೆ. 1: ದೇಣಿಗೆ ಸಂಗ್ರಹಿಸಿರುವ ಕುರಿತಂತೆ ಶ್ರೀರಾಮಜನ್ಮ ಭೂಮಿ ಟ್ರಸ್ಟ್ ಸದಸ್ಯರು ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತೆಲಂಗಾಣದ ವಾರಂಗಲ್‌ನಲ್ಲಿರುವ ಪರ್ಕಾಲದ ಟಿಆರ್‌ಎಸ್ ಶಾಸಕ ಸಿ. ಧರ್ಮ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ 53 ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

  ಪ್ರತಿಭಟನಾಕಾರರು ಘೋಷಣೆಗಳು ಕೂಗಿ ಕಲ್ಲುಗಳು ಹಾಗೂ ಮೊಟ್ಟೆಗಳನ್ನು ಎಸೆದು ಮನೆಯ ಕಿಟಕಿಯ ಗಾಜುಗಳಿಗೆ ಹಾನಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಸ್ಪಲ್ಪ ಸಮಯ ಲಘು ಉದ್ವಿಗ್ನತೆ ಸೃಷ್ಟಿಯಾಗಿತ್ತು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ರಾಮಮಂದಿರ ಟ್ರಸ್ಟ್‌ಗೆ ಸಾಮಾನ್ಯ ಜನರು ನೀಡುತ್ತಿರುವ ದೇಣಿಗೆಯ ಬಗ್ಗೆ ರೆಡ್ಡಿ ಅವರು ನೀಡಿದ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು.

ನಾವು 53 ಮಂದಿ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಸಂಬಂಧಿತ ಕಲಂ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತನ್ನ ಗ್ರಾಮದಲ್ಲಿರುವ ಟ್ರಸ್ಟ್‌ನ ಸದಸ್ಯರು ಯಾವದೇ ಲೆಕ್ಕಾಚಾರವನ್ನು ತೋರಿಸುತ್ತಿಲ್ಲ. ಅವರು ದೇಣಿಗೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರೆಡ್ಡಿ ಅವರು ಆರೋಪಿಸಿದ್ದರು.

ನಿವಾಸದ ಮೇಲಿನ ದಾಳಿ ಘಟನೆಯನ್ನು ಖಂಡಿಸಿರುವ ಟಿಆರ್‌ಎಸ್‌ನ ಕಾರ್ಯಾಧ್ಯಕ್ಷ ಹಾಗೂ ಸಚಿವ ಕೆ.ಟಿ. ರಾಮ ರಾವ್, ತೆಲಂಗಾಣದ ರಾಜಕೀಯ ವಾತಾವರಣದಲ್ಲಿ ಬಿಜೆಪಿ ದೈಹಿಕ ದಾಳಿ ನಡೆಸುವುದು ಅಪೇಕ್ಷಣೀಯವಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News