×
Ad

ರೈತರ ಕ್ಷೇಮಾಭ್ಯುದಯಕ್ಕೆ ಸರಕಾರ ಬದ್ಧ: ನಿರ್ಮಲಾ ಸೀತಾರಾಮನ್

Update: 2021-02-01 23:47 IST

ಹೊಸದಿಲ್ಲಿ, ಫೆ.1: ರೈತರ ಕ್ಷೇಮಾಭ್ಯುದಕ್ಕೆ ಸರಕಾರ ಬದ್ಧವಾಗಿದೆ. ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಜತೆಗೆ ರೈತರಿಗೆ ನೀಡುವ ಸಾಲದ ಮೊತ್ತವನ್ನು 16.5 ಲಕ್ಷ ಕೋಟಿಗೆ ಹೆಚ್ಚಿಸಲು ಬಜೆಟ್‌ನಲ್ಲಿ ಅನುದಾನ ರೂಪಿಸಲಾಗಿದೆ. ರೈತರ ಉತ್ಪನ್ನಗಳಿಗೆ ನೀಡುವ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಕನಿಷ್ಟ ಒಂದೂವರೆ ಪಟ್ಟು ಹೆಚ್ಚು ಇರುವಂತೆ ನಿಗದಿಗೊಳಿಸಲಾಗುವುದು ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ, ಸಣ್ಣ ನೀರಾವರಿ ನಿಧಿಗೆ ಹೆಚ್ಚಿನ ಅನುದಾನದ ಜೊತೆಗೆ ಎಪಿಎಂಸಿಗೆ ನೀಡಲಾಗುವ ಕೃಷಿ ಮೂಲಸೌಕರ್ಯ ನಿಧಿಯನ್ನು ವಿಸ್ತರಿಸಲಾಗಿದೆ. ಈ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪವನ್ನು ಮತ್ತಷ್ಟು ದೃಢಗೊಳಿಸಲಿದೆ. ರೈತರಿಗೆ ಸಾಕಷ್ಟು ಸಾಲ ಒದಗಿಸುವ ಉದ್ದೇಶದಿಂದ 2022ರ ಆರ್ಥಿಕ ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು 16.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದು ಈ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 15 ಲಕ್ಷ ಕೋಟಿ ಅಧಿಕವಾಗಿದೆ. ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ನಿರಂತರ ಆರ್ಥಿಕ ನೆರವು ಒದಗಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ಸಚಿವೆ ಹೇಳಿದ್ದಾರೆ.

ಮೀನುಗಾರಿಕಾ ಬಂದರು, ಮೀನು ಇಳಿಸುವ ಕೇಂದ್ರಗಳು ಹಾಗೂ ಕಡಲಕಳೆ ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಪ್ರಸ್ತಾವನೆ ಮಾಡಲಾಗಿದೆ. ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಪಾರಾದೀಪ್ ಮತ್ತು ಪೆಟುಗ್ಹಾಟ್ ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಒಳನಾಡು ಮೀನುಗಾರಿಕಾ ಬಂದರು ಮತ್ತು ಮೀನು ಇಳಿಸುವ ಕೇಂದ್ರಗಳನ್ನು ನದಿ ತೀರದಲ್ಲಿ ಸ್ಥಾಪಿಸಲಾಗುವುದು . ಕಡಲಕಳೆ ಮೀನುಗಾರಿಕೆಗೆ ಉತ್ತೇಜನ ನೀಡಲು ತಮಿಳುನಾಡಿನಲ್ಲಿ ಬಹುಉದ್ದೇಶಿತ ಕಡಲಕಳೆ ಪಾರ್ಕ್ ಆರಂಭಿಸಲು ನಿರ್ಧರಿಸಲಾಗಿದೆ. ಕೃಷಿ ಮೂಲಸೌಕರ್ಯ ಹೆಚ್ಚಿಸುವ ತುರ್ತು ಅಗತ್ಯವಿದೆ. ಆದ್ದರಿಂದ ಕೆಲವು ವಸ್ತುಗಳ ಮೇಲೆ 2.5%ರಿಂದ 100% ವರೆಗೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್(ಉಪತೆರಿಗೆ)ಯನ್ನು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ವಿಧಿಸಲು ನಿರ್ಧರಿಸಲಾಗಿದೆ. ಕೃಷಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯಾದರೆ ಉತ್ಪನ್ನ ಹೆಚ್ಚುತ್ತದೆ ಮತ್ತು ಉತ್ತಮ ರೀತಿಯ ದಾಸ್ತಾನು ಮತ್ತು ಸಂಸ್ಕರಣೆಯಿಂದ ಕೃಷಿಕರ ಆದಾಯವೂ ಹೆಚ್ಚುತ್ತದೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಅನುದಾನವನ್ನು 30,000 ಕೋಟಿಯಿಂದ 40,000 ಕೋಟಿಗೆ ಹೆಚ್ಚಿಸುವ, ಸಣ್ಣ ನೀರಾವರಿ ಯೋಜನೆಯ ಅನುದಾನವನ್ನು ಈಗಿರುವ 5,000 ಕೋಟಿ ರೂ.ಯಿಂದ 10,000 ಕೋಟಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನೂ ಬಜೆಟ್‌ನಲ್ಲಿ ನಮೂದಿಸಲಾಗಿದೆ. ಈಗ ಟೊಮ್ಯಾಟೊ, ಈರುಳ್ಳಿ, ಬಟಾಟೆಗಳಿಗೆ ಅನ್ವಯವಾಗುವ ಹಸಿರು ಯೋಜನೆ ಉಪಕ್ರಮವನ್ನು ಇತರ 22 ಕೆಟ್ಟುಹೋಗುವ ಕೃಷ್ಯುತ್ಪನ್ನಗಳಿಗೂ ವಿಸ್ತರಿಸಲಾಗುವುದು.

ಇಲೆಕ್ಟ್ರಾನಿಕ್ ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್(ಇ-ನ್ಯಾಮ್) ವೇದಿಕೆಯಲ್ಲಿ 1.68 ಕೋಟಿ ರೈತರು ನೋಂದಾಯಿಸಿಕೊಂಡಿದ್ದು 1.14 ಲಕ್ಷ ಕೋಟಿ ವ್ಯವಹಾರ ನಡೆಸಲಾಗಿದೆ. ಇನ್ನೂ 1,000 ಮಂಡಿ(ವ್ಯವಹಾರ ಕೇಂದ್ರ)ಗಳು ಇ-ನ್ಯಾಮ್ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಲು ಮುಂದೆ ಬಂದಿದೆ.

2013-14ರ ಬಳಿಕ ಗೋದಿ, ಭತ್ತ, ಧಾನ್ಯ ಹಾಗೂ ಹತ್ತಿಗೆ ಹೆಚ್ಚಿನ ಬೆಲೆ ಕೊಟ್ಟು ಸರಕಾರ ಪಡೆದಿದೆ. 2013-14ರಲ್ಲಿ ಗೋಧಿ ಸಂಗ್ರಹಣೆಗೆ ಸರಕಾರ 33,874 ಕೋಟಿ ರೂ. ವ್ಯಯಿಸಿದ್ದರೆ 2019-20ರಲ್ಲಿ ಈ ಮೊತ್ತ 62,802 ಕೋಟಿಗೆ ಏರಿದೆ. 2020-21ರಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಿಂದ 43.36 ಗೋಧಿ ಬೆಳೆಗಾರರು ಪ್ರಯೋಜನ ಪಡೆದಿದ್ದಾರೆ ಎಂದು ಸಚಿವೆ ವಿವರಿಸಿದರು.

ಬಜೆಟ್ ಮಂಡನೆಯ ಸಂದರ್ಭ ನಿರ್ಮಲಾ ಸೀತಾರಾಮನ್ ಕನಿಷ್ಟ ಬೆಂಬಲ ಬೆಲೆಯಡಿ ಖರೀದಿಯ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆಯೇ ವಿಪಕ್ಷಗಳು ‘ ಸರಕಾರ ಹೊಸ ಕೃಷಿ ಕಾಯ್ದೆಯನ್ನು ವಾಪಾಸು ಪಡೆಯಬೇಕು’ ಎಂದು ಘೋಷಣೆ ಕೂಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News