ಸ್ವಾವಲಂಬಿ ಭಾರತ ನಿರ್ಮಾಣದ ದೂರದೃಷ್ಟಿಯ ಬಜೆಟ್: ಪ್ರಧಾನಿ ಮೋದಿ ಶ್ಲಾಘನೆ

Update: 2021-02-01 18:27 GMT

ಹೊಸದಿಲ್ಲಿ, ಫೆ.1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಆತ್ಮನಿರ್ಭರ(ಸ್ವಾವಲಂಬಿ) ದೂರದೃಷ್ಟಿಯ ಮತ್ತು ಹಳ್ಳಿಗಳ ಅಭಿವೃದ್ಧಿ ಹಾಗೂ ರೈತರ ಹಿತಚಿಂತನೆಯ ಉದ್ದೇಶದ ಬಜೆಟ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಅಸಾಮಾನ್ಯ ಪರಿಸ್ಥಿತಿಯಲ್ಲಿ ಮಂಡಿಸಿರುವ ಬಜೆಟ್ ಇದಾಗಿದ್ದು ವಾಸ್ತವಿಕ ಪ್ರಜ್ಞೆ ಮತ್ತು ಅಭಿವೃದ್ಧಿಯ ವಿಶ್ವಾಸ ಮೂಡಿಸಿದೆ. ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ಮತ್ತು ರೈತರ ಆದಾಯವನ್ನು ಉತ್ತೇಜಿಸುವ ಕ್ರಮಕ್ಕೆ ವಿಶೇಷ ಗಮನ ನೀಡಲಾಗಿದ್ದು ವ್ಯಕ್ತಿಗಳು, ಹೂಡಿಕೆದಾರರು, ಕೈಗಾರಿಕೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಹಲವಾರು ಸಕಾರಾತ್ಮಕ ಬದಲಾವಣೆ ತರಲಿದೆ. ಸಮಾಜದ ಎಲ್ಲಾ ಕ್ಷೇತ್ರದ ಜನರನ್ನು ತಲುಪುವ ಹಾಗೂ ಆತ್ಮನಿರ್ಭರ ಪರಿಕಲ್ಪನೆಯನ್ನು ಹೊಂದಿರುವ ಬಜೆಟ್ ಇದಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

 ಅಭಿವೃದ್ಧಿಯ ಹೊಸ ಅವಕಾಶಗಳನ್ನು ವಿಸ್ತರಿಸುವ , ದೇಶದ ಯುವಜನತೆಗೆ ಹೊಸ ಅವಕಾಶ ರೂಪಿಸುವ , ದೇಶದ ಮಾನವ ಸಂಪನ್ಮೂಲಕ್ಕೆ ಹೊಸ ಆಯಾಮ ಕಲ್ಪಿಸುವ, ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವ , ತಂತ್ರಜ್ಞಾನದತ್ತ ಮುನ್ನಡೆಯುವ ದೃಷ್ಟಿಕೋನ ನಮ್ಮದಾಗಿದೆ. ಈ ಬಜೆಟ್ ಮೂಲಕ ಹೊಸ ಸುಧಾರಣೆಗಳನ್ನು ತರಲಾಗಿದೆ ಎಂದವರು ಹೇಳಿದ್ದಾರೆ. ಸಂಪತ್ತು ಹಾಗೂ ಸ್ವಾಸ್ಥಕ್ಕೆ ಉತ್ತೇಜನ ನೀಡುವ ಪೂರ್ವ ನಿಯಾಮಕ ಬಜೆಟ್ ಇದಾಗಿದೆ . ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ, ಮೂಲಸೌಕರ್ಯ ಅಭಿವೃದ್ಧಿಗೆ ದಾಖಲೆ ಮಟ್ಟದ ಅನುದಾನ ಒದಗಿಸಿದ ಬಜೆಟ್ ಇಧಾಗಿದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News