ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಪ್ರಕರಣ : ‘ಚಿಕ್‌ಕಿಂಗ್’ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Update: 2021-02-02 06:08 GMT
ಫೈಲ್ ಫೋಟೊ

ಮಂಗಳೂರು : ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಪಡೆದಿದ್ದ ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಹರಿದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಾಲ್‌ವೊಂದರಲ್ಲಿನ ‘ಚಿಕ್‌ಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭ ಕಳಪೆ ಗುಣಮಟ್ಟದ ಹಾಗೂ ಅವಧಿ ಮುಗಿದ ಚಿಕನ್ ಐಟಮ್ಸ್ , ಬನ್ ಮುಂತಾದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಹಾರ ಸುರಕ್ಷತೆಗೆ ಸಂಬಂಧಿಸಿದ ಆರು ಮಂದಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಅವಧಿ ಮುಗಿದ ಆಹಾರ ಖಾದ್ಯ ಸಹಿತ ವಿವಿಧ ಪದಾರ್ಥಗಳನ್ನು ಡಬ್ಬದಲ್ಲಿ ತುಂಬಿಸಿ ಸೀಲ್ ಮಾಡಿ ಸಾಗಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಲೇಡಿಹಿಲ್‌ನ ಸಲ್ಮಾ ಸಿಮ್ರನ್ ಎಂಬವರು ಶನಿವಾರ ಸಂಜೆ ‘ಚಿಕ್‌ಕಿಂಗ್’ ಸಂಸ್ಥೆಯಿಂದ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸೆಲ್‌ಗೆ ಆರ್ಡರ್ ಮಾಡಿದ್ದರು. ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ ಪಾರ್ಸೆಲ್ ಮನೆಗೆ ಬಂದಿದೆ. ನಂತರ ಸಲ್ಮಾ, ಅವರ ತಾಯಿ, ಮಕ್ಕಳು ಅದೇ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದಾರೆ. ಈ ನಡುವೆ ಚಿಕನ್ ಖಾದ್ಯದಲ್ಲಿ ಹುಳು ಕಾಣಿಸಿಕೊಂಡಿದ್ದು, ಕುಟುಂಬವೇ ಆತಂಕ್ಕೀಡಾಗಿತ್ತು. ಈ ಬಗ್ಗೆ ಸಲ್ಮಾ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಗ್ರಾಹಕ ನ್ಯಾಯಾಲಯಕ್ಕೂ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದಾಳಿ ನಡೆಸಿದ ಬಗ್ಗೆ ಅಧಿಕಾರಿಗಳು ಇಲ್ಲಿಯವರೆಗೆ ಖಚಿತಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News