ಗ್ರೇಟಾ ಥನ್ಬರ್ಗ್‌ ಸಹಿತ ಹಲವು ಅಂತಾರಾಷ್ಟ್ರೀಯ ಗಣ್ಯರಿಂದ ರೈತರ ಹೋರಾಟಕ್ಕೆ ಬೆಂಬಲ

Update: 2021-02-03 07:11 GMT

ಹೊಸದಿಲ್ಲಿ: ಕೃಷಿ ಕಾಯಿದೆಯ ವಾಪಸಾತಿಗೆ ಆಗ್ರಹಿಸಿ ದಿಲ್ಲಿಯ ಗಡಿ ಭಾಗಗಳಲ್ಲಿ ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರಿಗೆ  ಖ್ಯಾತ ಯುವ ಪರಿಸರ ಹೋರಾಟಗಾರ್ತಿ ಸ್ವೀಡನ್ ದೇಶದ ಗ್ರೆಟಾ ಥನ್ಬರ್ಗ್ ಬೆಂಬಲ ಸೂಚಿಸಿದ್ದಾರೆ. ``ನಾವು ಭಾರತದಲ್ಲಿ #ರೈತರ ಪ್ರತಿಭಟನೆಗೆ ಬೆಂಬಲವಾಗಿ ನಿಲ್ಲುತ್ತೇವೆ,'' ಎಂದು ಮಂಗಳವಾರ ರಾತ್ರಿ ಗ್ರೆಟಾ ಟ್ವೀಟ್ ಮಾಡಿದ್ದಾರೆ. ಗ್ರೆಟಾ ಮಾತ್ರವಲ್ಲದೇ ಇನ್ನಿತರ ಹಲವಾರು ಅಂತಾರಾಷ್ಟ್ರೀಯ ಗಣ್ಯರು ಈ ಕುರಿತಾದಂತೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಖ್ಯಾತ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನ ಅವರು ಕೂಡ ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಗ್ರೆಟಾ ಅವರ ಟ್ವೀಟ್ ಬಂದಿದೆ.

ಕಾಮೆಡಿಯನ್‌ ಹಾಗೂ ಯೂಟ್ಯೂಬರ್‌ ಲಿಲಿ ಸಿಂಗ್‌,ಅಮೆರಿಕನ್‌ ಪರಿಸರ ಹೋರಾಟಗಾರ್ತಿ ಜೆಮೀ ಮಾರ್ಗೊಲಿನ್‌, ಕೀನ್ಯಾದ ಪರಿಸರ ಹೋರಾಟಗಾರ್ತಿ ಎಲಿಝಬೆತ್‌ ವದೂಟಿ, ಯುನೈಟೆಡ್‌ ಕಿಂಗ್ಡಮ್‌ ನ ಸಂಸದೆ ಕ್ಲಾಡಿಯಾ ವೆಬ್‌, ಪ್ರೊಫೆಸರ್‌ ಹಾಗೂ ಸಾಹಿತಿ ಖಾಲಿದ್‌ ಬೈದೋನ್‌, ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ರ ಸಂಬಂಧಿ ಮೀನಾ ಹ್ಯಾರಿಸ್‌, ಹಾಗೂ ಇನ್ನಿತರ ಹಲವಾರು ಗಣ್ಯರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

"ನಾವು ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ?#ರೈತರ ಪ್ರತಿಭಟನೆ," ಎಂದು ರಿಹಾನ್ನ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಕೆಯ ಫಾಲೋವರ್ಸ್ ಸಂಖ್ಯೆ ಇನ್ನೂ ಒಂದು ಲಕ್ಷದಷ್ಟು ಏರಿಕೆಯಾಗಿದೆ. ರಿಹಾನ್ನಾಗೆ ಈಗಾಗಲೇ 100 ಮಿಲಿಯನ್‍ಗೂ ಅಧಿಕ ಫಾಲೋವರ್ಸ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News