×
Ad

ನೀರೆಂದು ಭಾವಿಸಿ ಸ್ಯಾನಿಟೈಸರ್ ಕುಡಿದ ಬಿಎಂಸಿಯ ಹಿರಿಯ ಅಧಿಕಾರಿ!

Update: 2021-02-03 18:52 IST

ಮುಂಬೈ: ಮಹಾರಾಷ್ಟ್ರದ ಮುಂಬೈನ ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ಯ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಮಧ್ಯಾಹ್ನ ಮಹಾನಗರ ಪಾಲಿಕೆಯ ಶಿಕ್ಷಣ ಮುಂಗಡಪತ್ರ ಮಂಡಿಸುವಾಗ ಸ್ಯಾನಿಟೈಸರ್ ನ್ನು ನೀರೆಂದು ತಪ್ಪಾಗಿ ಭಾವಿಸಿ ಕುಡಿದಿದ್ದಾರೆ. ತಕ್ಷಣವೇ ತನ್ನ ತಪ್ಪಿನ ಅರಿವಾಗಿ ಸ್ಯಾನಿಟೈಸರ್ ನ್ನು ಉಗಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ ಪೋಲಿಯೊ ಲಸಿಕೆ ನೀಡುವಾಗ 5 ವರ್ಷದೊಳಗಿನ 12 ಮಕ್ಕಳಿಗೆ ಪೋಲಿಯೊ ಲಸಿಕೆಯ ಬದಲಿಗೆ ಸ್ಯಾನಿಟೈಸರ್ ಹನಿಯನ್ನು ನೀಡಿದ್ದ ಆಘಾತಕಾರಿ ಘಟನೆ ನಡೆದ 3 ದಿನಗಳಲ್ಲಿ ಈ ಘಟನೆ ನಡೆದಿದೆ.

ಬಿಎಂಸಿಯ ಸಹಾಯಕ ಪುರಸಭೆ ಆಯುಕ್ತರಾದ ರಮೇಶ್ ಪವಾರ್ ಶಿಕ್ಷಣಕ್ಕೆ ಸಂಬಂಧಿಸಿದ ಇ-ಬಜೆಟ್ ಮಂಡಿಸಲು ಇತರ ಅಧಿಕಾರಿಗಳೊಂದಿಗೆ ಕುಳಿತ್ತಿದ್ದರು. ಸ್ಯಾನಿಟೈಸರ್ ಬಾಟಲಿಯನ್ನು ಪವಾರ್ ಅವರ ಡೆಸ್ಕ್ ನಲ್ಲಿ ಇಡಲಾಗಿತ್ತು. ಬಾಟಲಿಯ ಬಿಳಿ ಮುಚ್ಚಳ  ತೆರೆದಿದ್ದ ಪವಾರ್ ಒಂದು ಸಿಪ್ ಕುಡಿದಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಪವಾರ್ ನೀರನ್ನು ಕುಡಿಯುವ ಬದಲಿಗೆ ಸ್ಯಾನಿಟೈಸರ್ ನ್ನು ಕುಡಿದಾಗ ಅವರ ಬಳಿ ಇದ್ದ ಸಿಬ್ಬಂದಿಗಳು ಅವರನ್ನು ಎಚ್ಚರಿಸಿದರು. ಬಳಿಕ ಪವಾರ್ ಅವರು ಹಾಲ್ ಗೆ ತೆರಳಿ ಸ್ಯಾನಿಟೈಸರ್ ನ್ನು ಹೊರಗೆ ಉಗುಳಿದರು. ಬಾಯನ್ನು ಸ್ವಚ್ಛಗೊಳಿಸಿಕೊಂಡರು. ಸ್ಯಾನಿಟೈಸರ್ ಹಾಗೂ ನೀರಿನ ಬಾಟಲಿಯ ಗಾತ್ರ ಹಾಗೂ ಬಣ್ಣ ಒಂದೇ ರೀತಿ ಇದ್ದ ಕಾರಣ ಅಧಿಕಾರಿಯಿಂದ ಈ ಪ್ರಮಾದವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News