ರೈತ ಪ್ರತಿಭಟನೆ: ಕೇಂದ್ರ ಸರಕಾರದ ಪರ ಪೋಸ್ಟ್ ಹಾಕಿದ ಸಚಿನ್,ಕುಂಬ್ಳೆ ವಿರುದ್ಧ ಅಭಿಮಾನಿಗಳ ಆಕ್ರೋಶ

Update: 2021-02-03 19:02 GMT

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಯ ಕುರಿತು ರೈತರು ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ತಡೆಯಲು ಕೇಂದ್ರ ಸರಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈ ಕುರಿತಾದಂತೆ ಅಂತಾರಾಷ್ಟ್ರೀಯ ಖ್ಯಾತನಾಮರು ಟ್ವೀಟ್ ಮಾಡಲು ಆರಂಭಿಸುತ್ತಿದ್ದಂತೆಯೇ, ಭಾರತೀಯ ಸೆಲೆಬ್ರಿಟಿಗಳು ಕೇಂದ್ರ ಸರಕಾರದ ಬರ ಬ್ಯಾಟಿಂಗ್ ಮಾಡಲು ಆರಂಭಿಸಿದ್ದಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಕರಣ್ ಜೋಹರ್ ಸಾಲಿಗೆ ಇದೀಗ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಅನಿಲ್ ಕುಂಬ್ಳೆ ಸೇರ್ಪಡೆಗೊಂಡಿದ್ದಾರೆ.

"ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲು ಸಾಧ್ಯವಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಿ ಇರಬಹುದೇ ಹೊರತು ಇಲ್ಲಿನ ಭಾಗೀದಾರರಾಗಿ ಅಲ್ಲ. ಭಾರತೀಯಯರಿಗೆ ಭಾರತದ ಕುರಿತು ತಿಳಿದಿದೆ. ನಾವು ಐಕ್ಯತೆಯೊಂದಿಗಿರೋಣ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. "ನಾನು ನಿಮಗೋಸ್ಕರ ಟ್ವಿಟರ್ ಗೆ ಸೇರ್ಪಡೆಗೊಂಡಿದ್ದೆ. ನಿಮ್ಮನ್ನು ದೇವರಂತೆ ಕಂಡಿದ್ದೆ. ಆದರೆ ಮಾನವೀಯತೆಗೆ ಕಿಂಚಿತ್ತೂ ಬೆಲೆ ನೀಡದ ನಿಮ್ಮ ಕುರಿತು ಬೇಸರವಾಗುತ್ತಿದೆ" ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

"170 ಮಂದಿ ರೈತರು ಮೃತಪಟ್ಟಿದ್ದಾರೆ. ಅದರಲ್ಲಿ ಬಹುತೇಕರು ನೀವು ಒಂದೊಂದು ರನ್ ಗಳಿಸುವಾಗಲೂ ನಿಮಗೋಸ್ಕರ ಪ್ರೋತ್ಸಾಹ ನೀಡಿದವರಾಗಿದ್ದಾರೆ. ಅವರು ಅಷ್ಟೆಲ್ಲಾ ಕಷ್ಟಪಡುತ್ತಿರುವಾಗ ನೀವು ಒಂದು ಮಾತನ್ನೂ ಆಡಿಲ್ಲ. ಈಗ ನಾಟಕವಾಡುವುದೇಕೆ ಎಂದು ಬಳಕೆದಾರರೋರ್ವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರಕಾರದ ಪರ ಟ್ವೀಟ್ ಮಾಡಿದ ಮಾಜಿ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ, "ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತಕ್ಕೆ ತನ್ನ ಆಂತರಿಕ ಸಮಸ್ಯೆಯನ್ನು ಬಗೆಹರಿಸುವುದು ಹೇಗೆಂದು ತಿಳಿದಿದೆ" ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು, "ನಿಮ್ಮನ್ನು ವಿರಾಟ್ ಕೊಹ್ಲಿ ಹೊರಗೆಸೆದಿದ್ದು ತಪ್ಪೇನಲ್ಲ" ಎಂದಿದ್ದಾರೆ.

"ನೂರಕ್ಕೂ ಹೆಚ್ಚು ರೈತರು ದಿಲ್ಲಿಯ ಕೊರೆಯುವ ಚಳಿಯಲ್ಲಿ ಸತ್ತುಹೋದಾಗ ದೇಶದ ಘನತೆ, ಮರ್ಯಾದೆಯ ಪ್ರಶ್ನೆ ಎದೆಯಲ್ಲಿ ಮೂಡಲಿಲ್ಲವೇ? ರೈತರ ಮೇಲೆ ದಾಳಿಯಾದಾಗ, ಸುಳ್ಳು ಕೇಸು ಹಾಕಿದಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು ಸರ್? ಆಳುವ ಪಕ್ಷದ ಗುಲಾಮಗಿರಿ ಮಾಡುವುದಕ್ಕಿಂತ ಜನರ ಪರವಾಗಿ ನಿಂತುಕೊಳ್ಳಿ. ಇತಿಹಾಸ ನೆನಪಿಸಿಕೊಳ್ಳುತ್ತದೆ" ಎಂದು ಇನ್ನೋರ್ವ ಬಳಕೆದಾರರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News