×
Ad

ಪ್ರತಿಯೊಂದು ಸನ್ನಿವೇಶವೂ ಇನ್ನೊಬ್ಬರ ಆಂತರಿಕ ವಿಚಾರವಾಗಿದೆ: ರೈತರ ಪರ ಟ್ವೀಟ್ ಮಾಡಿದ ಕ್ರಿಕೆಟಿಗ ಸಂದೀಪ್‌ ಶರ್ಮಾ

Update: 2021-02-04 18:18 IST

ಹೊಸದಿಲ್ಲಿ: ಭಾರತದಲ್ಲಿ ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಪಾಪ್ ಗಾಯಕಿ ರಿಹಾನ್ನ ಸಹಿತ ಹಲವಾರು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಮಾಡಿದ್ದ ಟ್ವೀಟ್‍ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಾರವಾಗಿ ಪ್ರತಿಕ್ರಿಯಿಸಿ ಇದು ಭಾರತದ ಆಂತರಿಕ ವಿಚಾರವೆಂದಿದ್ದರೆ, ನಂತರ  ಇದೇ ರೀತಿಯ ಟ್ವೀಟ್‍ಗಳನ್ನು ಭಾರತದ ಹಲವು ಕ್ರಿಕೆಟಿಗರು ಹಾಗೂ ಚಿತ್ರ ತಾರೆಯರೂ ಮಾಡಿ ಭಾರತ ಸರಕಾರದ ಬೆಂಬಲಕ್ಕೆ ನಿಂತಿದ್ದರು. ಇದರ ಬೆನ್ನಲ್ಲೇ ಸನ್‍ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವ ಪಂಜಾಬ್ ರಾಜ್ಯದ  ವೇಗಿ ಸಂದೀಪ್ ಶರ್ಮ ತಮ್ಮ  ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಬರಹಗಳಿರುವ ಒಂದು ಚಿತ್ರವನ್ನು ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ. 

"ಈ ತರ್ಕ ಪರಿಗಣಿಸುವುದಾದರೆ ಯಾರು ಕೂಡ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಬಾರದು ಏಕೆಂದರೆ ಪ್ರತಿಯೊಂದು ಸನ್ನಿವೇಶವೂ ಇನ್ನೊಬ್ಬರ ಆಂತರಿಕ ವಿಚಾರ,'' ಎಂದು ತಲೆಬರಹದಲ್ಲಿ ಶರ್ಮ ಬರೆದಿದ್ದರು.

ಅವರು ಡಿಲೀಟ್ ಮಾಡಿರುವ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದರು.

"ಭಾರತೀಯ ರೈತರಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ಖ್ಯಾತ ಗಾಯಕಿ ರಿಹಾನ್ನ ಅವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಿತ ಹಲವರು ಟೀಕಿಸಿ ಇದು ಭಾರತದ ಆಂತರಿಕ ವಿಚಾರ ಎಂದಿದ್ದರು.

ಇದೇ ತರ್ಕ ಅನ್ವಯಿಸುವುದಾದಲ್ಲಿ, ನಾಝಿ ಆಡಳಿತದ ವೇಳೆ ಜರ್ಮನಿಯಲ್ಲಿ ಯಹೂದಿಗಳ ಮೇಲೆ ನಡೆದ ದೌರ್ಜನ್ಯವನ್ನು ಜರ್ಮನಿಯ ಹೊರಗಿನವರ್ಯಾರೂ ಟೀಕಿಸಬಾರದಾಗಿತ್ತು.

ಇದೇ ತರ್ಕ ಅನ್ವಯಿಸುವುದಾದಲ್ಲಿ, ಪಾಕಿಸ್ತಾನದ ಹೊರಗಿನ ಯಾರು ಕೂಡ ಅಲ್ಲಿ ಅಹ್ಮದಿಯಾ, ಹಿಂದುಗಳು, ಸಿಖ್ಖರು ಹಾಗೂ ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ಟೀಕಿಸಬಾರದು.

ಇದೇ ತರ್ಕದ ಆಧಾರದಲ್ಲಿ ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುವ ದೌರ್ಜನ್ಯಗಳನ್ನು ಅಥವಾ 1984ರಕ್ಕು ನಡೆದ ಸಿಖ್ ನರಮೇಧದ ಕುರಿತು ಭಾರತದ ಹೊರಗಿನವರ್ಯಾರೂ ಟೀಕಿಸಬಾರದು.

ಅದೇ ರೀತಿ ಅಮೆರಿಕಾದಲ್ಲಿ ಜನಾಂಗೀಯ ನಿಂದನೆಯನ್ನು ಯಾರೂ ಟೀಕಿಸಬಾರದು, ಚೀನಾದಲ್ಲಿ ಉಯಿಗುರ್ ಮುಸ್ಲಿಂರ ಮೇಲಿನ ದೌರ್ಜನ್ಯವನ್ನು ಯಾರೂ ಹೊರಗಿನವರು ಟೀಕಿಸಬಾರದು, ದಕ್ಷಿಣ ಆಫ್ರಿಕಾದಲ್ಲಿನ ವರ್ಣಬೇಧವನ್ನು ಹೊರಗಿನವರ್ಯಾರೂ ಖಂಡಿಸಬಾರದಾಗಿತ್ತು" ಎಂದು ಶರ್ಮ ಟ್ವೀಟ್‍ನಲ್ಲಿ ಹೇಳಲಾಗಿತ್ತು.

ಪಶ್ಚಿಮ ಬಂಗಾಳದ ಕ್ರಿಕೆಟಿಗ ಮನೋಜ್ ತಿವಾರಿ ಟ್ವೀಟ್ ಮಾಡಿ "ನಾನು ಚಿಕ್ಕವನಿದ್ದಾಗ ಗೊಂಬೆಯಾಟವನ್ನು ಯಾವತ್ತೂ ನೋಡಿರಲಿಲ್ಲ. ಅಂತಹ ಒಂದು ಆಟ ನೋಡಲು 35 ವರ್ಷ ಬೇಕಾಯಿತು" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News