ಎಫ್‌ಐಆರ್‌ನಲ್ಲಿ ಟೂಲ್ ಕಿಟ್ ರಚಿಸಿದವರ ಹೆಸರು ಮಾತ್ರ ಉಲ್ಲೇಖಿಸಿದ್ದೇವೆ: ದಿಲ್ಲಿ ಪೊಲೀಸರು

Update: 2021-02-04 18:32 GMT

ಹೊಸದಿಲ್ಲಿ, ಫೆ. 4: ನಾವು ಎಫ್‌ಐಆರ್‌ನಲ್ಲಿ ಸ್ವೀಡಿಶ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಅಥವಾ ಇತರ ಯಾರೊಬ್ಬರ ಹೆಸರನ್ನು ಉಲ್ಲೇಖಿಸಿಲ್ಲ. ಬದಲಾಗಿ ದೇಶದ್ರೋಹ, ಕ್ರಿಮಿನಲ್ ಪಿತೂರಿ ಹಾಗೂ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪಗಳ ಅಡಿ ‘ಕಿರು ಹೊತ್ತಗೆ’ ರಚಿಸಿದವರ ಹೆಸರನ್ನು ಉಲ್ಲೇಖಿಸಿದ್ದೇವೆ ಎಂದು ಪೊಲೀಸರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘‘ನಾವು ಎಫ್‌ಐಆರ್‌ನಲ್ಲಿ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸಿಲ್ಲ. ಕಿರು ಹೊತ್ತಗೆ ರಚಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ದಿಲ್ಲಿ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ’’ ಎಂದು ದಿಲ್ಲಿಯ ವಿಶೇಷ ಪೊಲೀಸ್ ಆಯುಕ್ತ ಪ್ರವೀರ್ ರಂಜನ್ ಹೇಳಿದ್ದಾರೆ.

‘ಕಿರು ಹೊತ್ತಗೆ’ ವಿಷಯದ ಕುರಿತಂತೆ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ಇದು ಗಂಭೀರ ವಿಷಯ ಎಂದು ಹೇಳಿದ್ದಾರೆ. ‘‘ಕಿರು ಹೊತ್ತಗೆ ವಿಷಯ ಗಂಭೀರವಾದ ವಿಷಯ. ಭಾರತದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಕೆಲವು ವಿದೇಶಿ ಶಕ್ತಿಗಳು ಪಿತೂರಿ ನಡೆಸುತ್ತಿವೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತಿದೆ’’ ಎಂದು ಅವರು ಹೇಳಿದ್ದಾರೆ.

 ಬುಧವಾರ ಮೊದಲ ಟ್ವೀಟ್‌ನಲ್ಲಿ ಥನ್‌ಬರ್ಗ್, ‘‘ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ’’ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ, ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ರೈತರ ಪ್ರತಿಭಟನೆ ಬಗ್ಗೆ ಹಾಗೂ ಪ್ರತಿಭಟನೆಗೆ ತಮ್ಮ ಬೆಂಬಲದ ಕ್ರಿಯಾ ಯೋಜನೆಯ ಮಾಹಿತಿಯನ್ನು ಲಗತ್ತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News