ನರಿಮೊಗರು: ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ

Update: 2021-02-05 12:43 GMT

ಪುತ್ತೂರು: ನರಿಮೊಗರು ಮತ್ತು ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ರಸ್ತೆಯ ಪಕ್ಕದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡು ವ್ಯವಹಾರ ನಡೆಸುತ್ತಿದ್ದ ಸುಮಾರು 20ಕ್ಕೂ ಅಧಿಕ ಅಂಗಡಿಗಳನ್ನು ಶುಕ್ರವಾರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರ ನೇತೃತ್ವದಲ್ಲಿ ಪೊಲೀಸ್ ಸಹಕಾರದೊಂದಿಗೆ ತೆರವುಗೊಳಿಸಲಾಯಿತು. 

ಶುಕ್ರವಾರ ಬೆಳಗ್ಗಿನಿಂದಲೇ ಬಿಗು ಪೊಲೀಸ್ ಬಂದೋಬಸ್ತ್ನಲ್ಲಿ ತೆರವು ಕಾರ್ಯ ಆರಂಭಗೊಂಡಿತು. ಸಂಜೆಯ ತನಕ ನಡೆಯಿತು. 
ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿನ ಸುಬ್ರಹ್ಮಣ್ಯ- ಮಂಜೇಶ್ವರ ಹೆದ್ದಾರಿಯಲ್ಲಿನ ಪುತ್ತೂರು ನಗರದ ಹೊರವಲಯದ ಪುರುಷರಕಟ್ಟೆ, ನರಿಮೊಗರು ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ಆರಂಭಗೊಂಡಿತು. ಇಲ್ಲಿನ ಬೆದ್ರಾಳ ಕಡೆಯಿಂದ ಮುಕ್ವೆ, ಪುರುಷರಕಟ್ಟೆವರೆಗೂ ರಸ್ತೆ ಬದಿಯಲ್ಲಿ ತಲೆ ಎತ್ತಿದ್ದ ಅನಧಿಕೃತ ರಚನೆಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಯಿತು. 

ಆರ್ಯಾಪು ಗ್ರಾಪಂ ವ್ಯಾಪ್ತಿಯಲ್ಲಿನ ಮಾಣಿ ಮೈಸೂರು ರಾಜ್ಯ ರಸ್ತೆಯ ಪುತ್ತೂರು ನಗರದ ಹೊರವಲಯದ ಸಂಪ್ಯ, ಕಲ್ಲರ್ಪೆ ಇನ್ನಿತರ ಕಡೆಗಳಲ್ಲಿ ರಸ್ತೆ ಬದಿಯಲ್ಲಿದ್ದ ಅನಧಿಕೃತ ಕಟ್ಟಡಗಳನ್ನೂ ತೆರವು ಮಾಡಲಾಯಿತು. 

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯದಲ್ಲಿ ನಗರ ಠಾಣೆ ಮತ್ತು ಗ್ರಾಮಾಂತರ ಪೊಲೀಸರು ಬಂದೋಬಸ್ತ್ ನಡೆಸಿದ್ದರು. ಮುಂಚಿತವಾಗಿ ಸೂಚನೆ ನೀಡಿದ್ದ ಕಾರಣ ಕೆಲವು ಅಂಗಡಿಗಳ ಮಾಲಕರು ಸ್ವಯಂ ಪ್ರೇರಿತರಾಗಿ ತೆರವು ಮಾಡಿದರು.  

ತಾಪಂ ಸಭೆಯಲ್ಲಿ ಸಾಕಷ್ಟು ಬಾರಿ ಅಕ್ರಮ ಕಟ್ಟಡಗಳನ್ನು ತೆರವು ನಡೆಸುವ ಬಗ್ಗೆ ಚರ್ಚೆ ನಡೆದಿತ್ತು. ಕಳೆದ ಕೆಲವು ವರ್ಷಗಳಿಂದ ಅಕ್ರಮ ಕಟ್ಟಡಗಳ ಸಂಖ್ಯೆ ರಸ್ತೆ ಬದಿಯಲ್ಲಿ ಹೆಚ್ಚುತ್ತಿದ್ದು, ತಾರತಮ್ಯ ಮಾಡದೆ ಎಲ್ಲ ಅನಧಿಕೃತ ರಚನೆಗಳನ್ನು ತೆರವು ಮಾಡಬೇಕೆಂದು ಸದಸ್ಯರು ಆಗ್ರಹಿಸಿದ್ದರು. 

ಇದೀಗ ಬಿರುಸಿನ ತೆರವು ಕಾರ್ಯಚರಣೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಇದು ತಾಲೂಕು ವ್ಯಾಪ್ತಿಗೆ ವಿಸ್ತರಣೆಗೊಳ್ಳಲಿದೆ ಎಂದು ತಿಳಿದುಬಂದಿದೆ. 

ತಾಲೂಕಿನ ಯಾವುದೇ ಭಾಗದಲ್ಲೂ ಅಕ್ರಮ ಕಟ್ಟಡಗಳಿಗೆ ಅವಕಾಶ ನೀಡುವುದಿಲ್ಲ. ರಸ್ತೆ ಮಾರ್ಜಿನ್ ಬಿಡದೆ ಇಲ್ಲವೇ ಸರಕಾರಿ ಜಾಗ ಅತಿಕ್ರಮಿಸಿಕೊಂಡು ಕಟ್ಟಡ ಅಥವಾ ಅಂಗಡಿಯಂಥ ರಚನೆ ನಿರ್ಮಿಸಿಕೊಂಡಿದ್ದಲ್ಲಿ ಅಂಥವರು ತಕ್ಷಣ ತೆರವು ಮಾಡಬೇಕು. ಇಲ್ಲದಿದ್ದರೆ ಆಡಳಿತದ ವತಿಯಿಂದಲೇ ತೆರವು ಮಾಡಲಾಗುವುದು.
-ನವೀನ್ ಕುಮಾರ್ ಭಂಡಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ 

ತೆರವು ಕಾರ್ಯಾಚರಣೆ ವಿರೋಧಿಸಿ ಧರಣಿ ಸತ್ಯಾಗ್ರಹ: ಶಕುಂತಳಾ ಶೆಟ್ಟಿ 
ಅನಧಿಕೃತ ಕಟ್ಟಡಗಳನ್ನು ತೆರವು ಮಾಡುವ ನೆಪದಲ್ಲಿ ತಾಲೂಕು ಆಡಳಿತವು ಬಡವರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದನ್ನೂ ವಿರೋಧಿಸಿ  ಎಲ್ಲಾ ಸಂತ್ರಸ್ತರ ಸಹಕಾರದಲ್ಲಿ ಶನಿವಾರ ಬೆಳಗ್ಗೆ ಪುತ್ತೂರು ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಶಕುಂತಳಾ ಶೆಟ್ಟಿ ಅವರು ಶುಕ್ರವಾರ ಅಪರಾಹ್ನ ಪುತ್ತೂರು ಹೊರವಲಯದ ಪುರುಷರಕಟ್ಟೆ, ಮುಕ್ವೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂತ್ರಸ್ಥರು ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡರು. 

ಅಂಗಡಿ ತೆರವು ಮಾಡುವ ಭರದಲ್ಲಿ ಮನೆಗಳನ್ನೂ ಏಕಾಏಕಿ ಉರುಳಿಸಿದ್ದಾರೆ. ನೊಟೀಸ್ ಕೂಡ ನೀಡಿಲ್ಲ. ರಾಕ್ಷಸೀ ಧೋರಣೆ ಅನುಸರಿಸಿದ್ದಾರೆ. ನಮ್ಮ ಬದುಕು ಬೀದಿಪಾಲಾಗಿದೆ ಎಂದು ಸಂತ್ರಸ್ಥರು ಅಲವತ್ತುಕೊಂಡರು.

ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಕುಂತಳಾ ಶೆಟ್ಟಿ, ಜೆಸಿಬಿ ಇದೆ, ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದು ಎಂದು ಅಧಿಕಾರಿಗಳು ಭಾವಿಸಿದ್ದರೆ ಅದು ತಪ್ಪು. ಇಲ್ಲಿ ಒಂದು ಮನೆಯ ಯಜಮಾನ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಮಹಿಳೆಯೊಬ್ಬರೇ ಇರುವಾಗ ಬಂದು ಮನೆ ಕೆಡವಿದ್ದಾರೆ. ಮೂರು ದಶಕಗಳಿಂದ ವಾಸ್ತವ್ಯ ಇರುವ ಎರಡು ಮನೆಗಳನ್ನು ಏಕಾಏಕಿ ನಾಶ ಮಾಡಿದ್ದಾರೆ. ಶ್ರೀಮಂತರ ದೊಡ್ಡ ಮನೆಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಇದನ್ನು ನಾವು ಹಾಗೆಯೇ ಬಿಡುವುದಿಲ್ಲ. ಈ ದಬ್ಬಾಳಿಕೆ ವಿರುದ್ಧ ಸಂತ್ರಸ್ತರ ಜತೆ ಸೇರಿಕೊಂಡು ಶನಿವಾರ ತಾಪಂ ಕಚೇರಿ ಎದುರು ಧರಣಿ ಕೂರುತ್ತೇವೆ. ವಿನಯ ಕುಮಾರ್ ಸೊರಕೆ ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News