ಎಲ್‌ಐಸಿ ಶೇರು ವಿಕ್ರಯ, ವಿಮೆಯಲ್ಲಿ ವಿದೇಶಿ ನೇರ ಬಂಡವಾಳ ಮಿತಿ ಹೆಚ್ಚಳಕ್ಕೆ ವಿರೋಧ

Update: 2021-02-05 14:44 GMT

ಉಡುಪಿ, ಫೆ.5: ಕೇಂದ್ರದ ಅರ್ಥ ಸಚಿವೆ ನಿರ್ಮಲ ಸೀತಾರಾಮನ್ ಈ ವರ್ಷದ ಬಜೆಟ್‌ನಲ್ಲಿ ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿರುವ ಕೆಲವೊಂದು ಮಹತ್ವದ ಘೋಷಣೆ ಹಾಗೂ ತೆಗೆದುಕೊಂಡಿರುವ ಕ್ರಮಗಳನ್ನು ಅಖಿಲ ಭಾರತ ವಿಮಾ ನೌಕರರ ಸಂಘದ ಉಡುಪಿ ವಿಭಾಗ ಖಂಡಿಸಿದ್ದು, ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಕಾರ್ಯಕ್ರಮ ರೂಪಿಸಲಿದೆ ಎಂದು ತಿಳಿಸಿದೆ.

ಬಜೆಟ್ ಭಾಷಣದಲ್ಲಿ ವಿಮಾ ಕಾಯ್ದೆ 1938ಕ್ಕೆ ಕೆಲವೊಂದು ತಿದ್ದುಪಡಿ ಯನ್ನು ತರುವ ಮೂಲಕ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಈಗಿನ ಶೇ.49ರಿಂದ ಶೇ.74ಕ್ಕೆ ಏರಿಸುವುದು ಮತ್ತು ವಿದೇಶಿ ಮಾಲಕತ್ವದ ಸಂಸ್ಥೆಗಳಿಗೆ ಕೆಲವೊಂದು ರಕ್ಷಣಾ ನಿಯಮಗಳೊಂದಿಗೆ ವ್ಯವಹಾರವನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದಿದ್ದಾರೆ.

ಅಲ್ಲದೇ ಒಂದು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆ ಮತ್ತು ಎರಡು ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಈ ವಿತ್ತೀಯ ವರ್ಷದಲ್ಲಿ ಎಲ್‌ಐಸಿಯ ಶೇರು ವಿಕ್ರಯವನ್ನು ಕಾರ್ಯರೂಪಕ್ಕೆ ತರುವ ಸೂಚನೆಯನ್ನು ನೀಡಿದ್ದಾರೆ.

ಅಲ್ಲದೇ ಒಂದು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆ ಮತ್ತು ಎರಡು ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಈ ವಿತ್ತೀಯ ವರ್ಷದಲ್ಲಿ ಎಲ್‌ಐಸಿಯ ಶೇರು ವಿಕ್ರಯವನ್ನು ಕಾರ್ಯರೂಪಕ್ಕೆ ತರುವ ಸೂಚನೆಯನ್ನು ನೀಡಿದ್ದಾರೆ.

ವಿಮಾ ಉದ್ದಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಹೆಚ್ಚಳಕ್ಕೆ ಯಾವುದೇ ರೀತಿಯ ಸಮರ್ಥನೆಗಳಿಲ್ಲ. ಈಗಾಗಲೇ ಶೇ.49 ವಿದೇಶಿ ನೇರ ಬಂಡವಾಳದ ಮಿತಿಯಿದ್ದರೂ ಸಹ ಖಾಸಗಿ ವಿಮಾ ಉದ್ಯಮಗಳಲ್ಲಿ ವಿದೇಶಿ ನೇರ ಬಂಡವಾಳ ಈಗಿರುವ ಮಿತಿಗಿಂತ ತುಂಬಾ ಕಡಿಮೆಯಿದೆ. ವಿಮಾ ಉದ್ದಿಮೆ ಬೆಳವಣಿಗೆಗೆ ವಿದೇಶಿ ಬಂಡವಾಳದ ಕೊರತೆಯು ಅಡಚಣೆಯಾಗಿಲ್ಲ. ವಿದೇಶಿ ನೇರ ಬಂಡವಾಳದ ಹೆಚ್ಚಳದಿಂದ ದೇಶೀಯ ಉಳಿತಾಯದ ಮೇಲೆ ವಿದೇಶಿ ಬಂಡವಾಳವು ಇನ್ನಷ್ಟು ನಿಯಂತ್ರಣವನ್ನು ಸಾಧಿಸಲಿದೆ ಎಂದು ಉಡುಪಿ ವಿಭಾಗ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ಹೇಳಿಕೆಯೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಸಂಸ್ಥೆಯ ಖಾಸಗೀಕರಣ ದೇಶದ ಹಿತಕ್ಕೆ ಮಾರಕವಾಗಿದೆ ಎಂಬುದು ಸಂಘದ ಅಭಿಮತವಾಗಿದೆ. ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಕೂಡಾ ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ರಂಗ ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ದೇಶದ ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿದ್ದ ಸನ್ನಿವೇಶದಲ್ಲಿ ಕೂಡಾ ಸಾಮಾನ್ಯ ವಿಮಾ ರಂಗ ಗಮನಾರ್ಹ ಬೆಳವಣಿಗೆ ದಾಖಲಿಸಿದೆ ಎಂದು ಹೇಳಿಕೆ ತಿಳಿಸಿದೆ.

ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಕಂಪೆನಿಗಳ ಖಾಸಗೀಕರಣದ ಬದಲು ಸಾರ್ವಜನಿಕ ವಲಯದ ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳನ್ನು ವಿಲೀನಗೊಳಿಸುವ ಮೂಲಕ ಸ್ಪರ್ಧೆಯನ್ನು ಎದುರಿಸಲು ಸನ್ನದ್ದಗೊಳಿಸುವುದು ಸೂಕ್ತವಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

'ಆತ್ಮನಿರ್ಭರ ಭಾರತ'ದ ಬಗ್ಗೆ ಸರಕಾರ ಮಾತನಾಡುತ್ತಿರುವಾಗ ಎಲ್ಲೈಸಿಯ ಶೇರು ವಿಕ್ರಯ ಖಂಡಿತವಾಗಿಯೂ ಸರಕಾರಕ್ಕೆ ದೊಡ್ಡ ಹೊಡೆತವಾಗಲಿದೆ. ಈ ಸಂಸ್ಥೆ ಲಾಭವನ್ನು ತನಗಾಗಿ ಬಳಸಿಕೊಳ್ಳದೆ ಅದು ಪೂರ್ಣಪ್ರಮಾಣದಲ್ಲಿ ಸರಕಾರ ಮತ್ತು ಪಾಲಿಸಿದಾರರಿಗೆ ಹಂಚಿಕೆ ಮಾಡುತ್ತಿದೆ. 1956ರಲ್ಲಿ ಸಂಸತ್ತಿನಲ್ಲಿ ಕಾಯಿದೆಯ ಮೂಲಕ ಯಾವ ಉದ್ದೇಶಗಳಿಂದ ಅಸ್ತಿತ್ವಕ್ಕೆ ಬಂದಿತೋ ಅದಕ್ಕಾಗಿ ನಿಷ್ಟೆಯಿಂದ ಮತ್ತು ಬದ್ದತೆಯಿಂದ ಈ ಸಂಸ್ಥೆ ಕೆಲಸ ಮಾಡಿದೆ. ಎಲ್ಲೈಸಿಯ ಶೇರು ವಿಕ್ರಯ ಈ ಎಲ್ಲಾ ಉದ್ದೇಶಗಳನ್ನು ತಲೆಕೆಳಗಾಗಿಸುತ್ತದೆ.

ಅಖಿಲ ಭಾರತ ವಿಮಾ ನೌಕರರ ಸಂಘ ಈಗಾಗಲೇ ಎಲ್ಲೈಸಿ ಮತ್ತು ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಕಂಪನಿಗಳ ಶೇರು ವಿಕ್ರಯದ ವಿರುದ್ಧ ಮತ್ತು ವಿಮೆಯಲ್ಲಿ ವಿದೇಶಿ ನೇರ ಬಂಡವಾಳ ಮಿತಿಯ ಹೆಚ್ಚಳದ ವಿರುದ್ಧ ಅರಿವು ಮೂಡಿಸುವುದರಲ್ಲಿ ನಿರತವಾಗಿದೆ. ಈಗಾಗಲೇ ದೊಡ್ಡ ಸಂಖ್ಯೆಯ ಸಾರ್ವಜನಿಕ ಅಭಿಪ್ರಾಯ ಸರಕಾರದ ಈ ನಡೆಯ ವಿರುದ್ಧವಿದೆ. ಸಂಘವು ಈ ಹೋರಾಟವನ್ನು ಮುಂದುವರಿಸುವ ಕಾರ್ಯದಲ್ಲಿ ತನ್ನನ್ನು ಸಂಪೂರ್ಣ ವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಪ್ರಭಾಕರ ಕುಂದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News