ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್

Update: 2021-02-06 18:08 GMT

ಲಕ್ನೋ, ಫೆ.6: ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಕಾರ್ಯವಿಧಾನದ ಕುರಿತು ಕೆಲವರು ರೈತರಲ್ಲಿ ಗೊಂದಲವನ್ನು ಹರಡುತ್ತಿದ್ದಾರೆಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಪಾದಿಸಿದ್ದಾರೆ. ಮೋದಿ ಸರಕಾರದ ಆಡಳಿತದಲ್ಲಿ ಬೆಳೆಗಳ ನಿಗದಿತ ದರದಲ್ಲಿ ಒಂದೂವರೆ ಪಟ್ಟು ಏರಿಕೆಯಾಗಿರುವುದು ವಾಸ್ತವ ಸಂಗತಿ ಎಂದವರು ಹೇಳಿದ್ದಾರೆ.

ಲಕ್ನೋದಲ್ಲಿ ಬಿಜೆಪಿಯ ಉತ್ತರಪ್ರದೇಶ ಘಟಕದ ಮುಖ್ಯ ಕಾರ್ಯಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ‘‘ ಕೃಷಿ ಕಾಯ್ದೆಗಳನ್ನು ಕರಾಳ ಶಾಸನಗಳೆಂದು ಬಣ್ಣಿಸುವ ಜನರು ಹಾಗೂ ಕೃಷಿಯ ಬಗ್ಗೆ ತಿಳುವಳಿಕೆ ಇರುವವರು ಮುಂದೆ ಬಂದು, ಕೃಷಿ ಕಾನೂನಿನಲ್ಲಿ ಕರಾಳವಾದುದು ಏನಿದೆ ಎಂಬುದನ್ನು ತಿಳಿಸಬೇಕು’’ ಎಂದರು. ಜನರಿಂದ ತಿರಸ್ಕಾರಕ್ಕೊಳಗಾದವರು ಅಥವಾ ಭವಿಷ್ಯದಲ್ಲಿ ತಾವು ನಿಷ್ಪ್ರಯೋಜಕರಾಗಿ ಹೋಗಬಹುದೆಂಬ ಭೀತಿಯಿರುವವರು ಇದನ್ನು ದೊಡ್ಡ ವಿವಾದವಾಗಿ ಮಾಡುತ್ತಿದ್ದಾರೆ ಮತ್ತು ಈ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಮಾಡಿದಂತೆ ಇಲ್ಲಿಯೂ ಗೊಂದಲವನ್ನು ಹರಡುತ್ತಿದ್ದಾರೆ’’ ಎಂದು ಆಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ರೈತರ ಕಲ್ಯಾಣಕ್ಕೆ ಹಾಗೂ ಅವರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಬದ್ಧವಾಗಿದೆ ಎಂದರು.

2021-22ರ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಪ್ರಸ್ತಾವಿಸಿದ ಶೇಖಾವತ್ ‘‘ದೇಶವನ್ನು ಸ್ವಾವಲಂಬಿಯಾಗಿ ಮಾಡುವ ಉದ್ದೇಶದೊಂದಿಗೆ ಬಜೆಟನ್ನು ಮಂಡಿಸಲಾಗಿದೆ. ಯಾವತ್ತಾದರೂ ‘ಆತ್ಮನಿರ್ಭರ ಭಾರತದ ಇತಿಹಾಸ’ವನ್ನು ಬರೆದಾಗ ಈ ಬಜೆಟ್ ಒಂದು ಮೈಲುಗಲ್ಲೆಂಬುದು ಸಾಬೀತಾಗಲಿದೆ. ಪ್ರತಿಕೂಲತೆಯನ್ನು ಅವಕಾಶವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಈ ಬಜೆಟನ್ನು ಮಂಡಿಸಲಾಗಿದೆ ಎಂದರು.

ನೂತನ ಬಜೆಟ್‌ನಲ್ಲಿ ಕೇಂದ್ರ ಸರಕಾರವು ನಗರಪ್ರದೇಶಗಳಲ್ಲಿ ಜಲ ಜೀವನ ಮಿಶನ್‌ಗೆ ಚಾಲನೆ ನೀಡಿದ್ದು ಉತ್ತರಪ್ರದೇಶವು ಅದರ ಅಧಿಕ ಪ್ರಯೋಜನವನ್ನು ಪಡೆಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News