ನೌಕಾಪಡೆ ಅಧಿಕಾರಿಯ ಅಪಹರಣ, ಜೀವಂತ ದಹನ
ಮುಂಬೈ, ಫೆ.7: ರಾಂಚಿಯ ನೌಕಾಪಡೆ ಅಧಿಕಾರಿಯೊಬ್ಬರನ್ನು ಅಪಹರಿಸಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಅಧಿಕಾರಿಯನ್ನು ಬೆಂಕಿ ಹಚ್ಚಿ ಸಾಯಿಸಿದ ಘಟನೆ ವರದಿಯಾಗಿದೆ. ತೀವ್ರ ಸುಟ್ಟ ಗಾಯಗಳಾಗಿದ್ದ ಅಧಿಕಾರಿ ಶನಿವಾರ ಕೊನೆಯುಸಿರೆಳೆದಿದ್ದಾರೆ.
ಜಾರ್ಖಂಡ್‌ನ ರಾಂಚಿಯವರಾದ ಸೂರಜ್ ಕುಮಾರ್ ದುಬೆ (27) ಎಂಬ ಅಧಿಕಾರಿ ಸಾವಿಗೀಡಾದವರು. "ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ" ಎಂದು ಪಾಲ್ಗರ್ ಎಸ್ಪಿ ದತ್ತಾತ್ರೇಯ ಶಿಂಧೆ ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅಧಿಕಾರಿಯನ್ನು ಮುಂಬೈ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾಗಿ ಶಿಂಧೆ ವಿವರಿಸಿದ್ದಾರೆ.
"ಅಪಹರಣಕಾರರು ಬೇಡಿಕೆ ಇಟ್ಟ 10 ಲಕ್ಷ ರೂಪಾಯಿ ಪಾವತಿಸಲು ಅಧಿಕಾರಿ ನಿರಾಕರಿಸಿದ್ದರು. ಸ್ಥಳೀಯರಿಂದ ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಹಾಗೂ ಬಳಿಕ ಮುಂಬೈಗೆ ಕರೆತರಲಾಗಿತ್ತು. ಅವರನ್ನು ಚೆನ್ನೈ ವಿಮಾನ ನಿಲ್ದಾಣ ಬಳಿಯಿಂದ ಅಪಹರಿಸಲಾಗಿತ್ತು ಎಂದು ಶಿಂಧೆ ಹೇಳಿದ್ದಾರೆ.
ನೌಕಾಪಡೆ ಅಧಿಕಾರಿಯ ಕಾರನ್ನು ಚೆನ್ನೈ ವಿಮಾನ ನಿಲ್ದಾಣ ಬಳಿ ಜನವರಿ 31ರಂದು ಮೂವರು ಅಪಹರಿಸಿದ್ದರು. ಮೂರು ದಿನ ಕಾಲ ಅವರನ್ನು ಚೆನ್ನೈನ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು. ಬಳಿಕ ಫೆಬ್ರವರಿ 5ರಂದು ಬೆಳಗ್ಗೆ 9ರ ಸುಮಾರಿಗೆ ಅವರನ್ನು ಮಹಾರಾಷ್ಟ್ರ- ಗುಜರಾತ್ ಗಡಿಯ ಪಶ್ಚಿಮ ಘಟ್ಟ ವ್ಯಾಪ್ತಿಯ ವೇವ್‌ಜಿ ಗ್ರಾಮದ ಸಮೀಪ ಅರಣ್ಯಕ್ಕೆ ಕರೆ ತರಲಾಗಿತ್ತು ಎಂದು ಘಟನೆಯ ವಿವರ ನೀಡಿದ್ದಾರೆ.
ಮಧ್ಯಾಹ್ನದ ವೇಳೆ ಕಾಡಿನಲ್ಲಿ ನಗ್ನ ವ್ಯಕ್ತಿ ಬಿದ್ದಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘೋಲವಾಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.