ಮುಂಬೈ: ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಕರಿ ಪತಾಕೆ ಪ್ರದರ್ಶನ
ಮುಂಬೈ, ಫೆ. 7: ಕೇಂದ್ರ ಸರಕಾರದ 2021-22ರ ಬಜೆಟ್ ಹಾಗೂ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಂಬೈಗೆ ರವಿವಾರ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರಿ ಪತಾಕೆ ಪ್ರದರ್ಶಿಸಿದರು.
ಆದರೆ, ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ ಸ್ಥಳಕ್ಕೆ ಪ್ರತಿಭಟನಾಕಾರರು ತಲಪುವ ಮೊದಲೇ ತಡೆಯಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಮಂಡಿಸಲಾದ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಸಂವಹನ ನಡೆಸಲು ದಾದರ್ ಪ್ರದೇಶದಲ್ಲಿರುವ ಯೋಗಿ ಸಭಾ ಗೃಹಕ್ಕೆ ನಿರ್ಮಲಾ ಸೀತಾರಾಮನ್ ಅವರು ತಲುಪಿದಾಗ ಸುಮಾರು 400ರಿಂದ 500 ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶಂಸಿಸಿ ಘೋಷಣೆಗಳನ್ನು ಕೂಗಿದರು ಎಂದು ಪೊಲೀಸರು ತಿಳಿಸಿದ್ದಾರೆ.
ದಾದರ್ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಇಂದು ಬೆಳಗ್ಗಿನಿಂದಲೇ ಪ್ರತಿಭಟನಾಕಾರರು ಜಮಾಯಿಸಲು ಆರಂಭಿಸಿದ್ದರು. ಅವರು ಕೇಂದ್ರದ ಬಜೆಟ್ ಹಾಗೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಸಿಲಿಂಡರ್, ರೈಲ್ವೆ ಟಿಕೆಟ್ ಸೇರಿದಂತೆ ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಅವರು ತಿಳಿಸಿದ್ದಾರೆ. ‘‘ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಯಾರೊಬ್ಬರನ್ನು ವಶಕ್ಕೆ ತೆಗೆದುಕೊಂಡಿಲ್ಲ ಹಾಗೂ ಎಫ್‌ಐಆರ್ ದಾಖಲಿಸಿಲ್ಲ’’ ಎಂದು ಪೊಲೀಸ್ ಉಪ ಆಯುಕ್ತ (ವಲಯ-4) ವಿಜಯ್ ಪಾಟಿಲ್ ತಿಳಿಸಿದ್ದಾರೆ.