ತಮಿಳು ನಾಡು:30,000 ವಿದ್ಯುತ್‌ಮಗ್ಗಗಳು 11 ದಿನಗಳ ಕಾಲ ಸ್ಥಗಿತ
ಈರೋಡ್,ಫೆ : ರೇಯಾನ್ ನೂಲಿನ ಬೆಲೆಗಳಲ್ಲಿ ಏರಿಕೆಯನ್ನು ವಿರೋಧಿಸಿ ಇಲ್ಲಿಯ 30,000 ಕೈಮಗ್ಗಗಳು ಫೆ.11ರಿಂದ 11 ದಿನಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಲಿವೆ ಎಂದು ವಿದ್ಯುತ್‌ಮಗ್ಗ ಬಟ್ಟೆ ತಯಾರಕರ ಸಂಘದ ಸಂಚಾಲಕ ಬಿ.ಕಂದವೇಲ್ ಅವರು ರವಿವಾರ ಇಲ್ಲಿ ತಿಳಿಸಿದರು.
ಸದ್ಯ ರೇಯಾನ್ ನೂಲಿನ ಬೆಲೆ ಪ್ರತಿ ಕೆ.ಜಿ.ಗೆ 250 ರೂ.ಗಳಿದ್ದು,ಇದು ಕಳೆದ ವರ್ಷದ ಡಿಸೆಂಬರ್‌ನಲ್ಲಿದ್ದ ಬೆಲೆಗಿಂತ ಶೇ.25ರಷ್ಟು ಅಧಿಕವಾಗಿದೆ. ಬೆಲೆಏರಿಕೆಯಿಂದಾಗಿ ಸಿದ್ಧ ಉತ್ಪನ್ನಗಳನ್ನು ಹೆಚ್ಚಿನ ದರಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ತಯಾರಕರ ಬಳಿ ದಾಸ್ತಾನು ಹೆಚ್ಚುತ್ತಿದೆ. ಪ್ರತಿ ಮೀ.ರೇಯಾನ್ ಬಟ್ಟೆಯ ಉತ್ಪಾದನಾ ವೆಚ್ಚ 38 ರೂ.ಆಗಿದೆ,ಆದರೆ ಖರೀದಿದಾರರು ಕೇವಲ 32 ರೂ.ನೀಡುತ್ತಿದ್ದಾರೆ ಎಂದ ಅವರು,ಕಳೆದ ಡಿಸೆಂಬರ್‌ನಲ್ಲಿ ವಿದ್ಯುತ್ ಮಗ್ಗ ನೇಕಾರರು ತಮ್ಮ ಘಟಕಗಳನ್ನು ಮುಚ್ಚಿ ಪ್ರತಿಭಟಿಸಿದ್ದರು,ಆದರೆ ರೇಯಾನ್ ನೂಲಿನ ಬೆಲೆಯನ್ನು ಕಡಿತಗೊಳಿಸಲು ಸರಕಾರವು ಸಿದ್ಧವಿಲ್ಲ. ಹೀಗಾಗಿ ಫೆ.11ರಿಂದ 11 ದಿನಗಳ ಕಾಲ ಮತ್ತೊಮ್ಮೆ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು. ಪ್ರತಿಭಟನೆಯ ಅವಧಿಯಲ್ಲಿ ನೇಕಾರರು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಮತಪ್ರದರ್ಶನ ನಡೆಸಿ ರೇಯಾನ್ ನೂಲಿನ ಬೆಲೆಯನ್ನು ತಗ್ಗಿಸಲು ಪರಿಣಾಮಕಾರಿ ಕ್ರಮಗಳಿಗೆ ಆಗ್ರಹಿಸಲಿದ್ದಾರೆ ಎಂದೂ ಕಂದವೇಲ್ ತಿಳಿಸಿದರು.