×
Ad

ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಆಗ್ರಹಿಸಿ ಮನವಿ: ಸುಪ್ರೀಂ ಕೋರ್ಟ್ ತಿರಸ್ಕಾರ

Update: 2021-02-08 23:19 IST

ಹೊಸದಿಲ್ಲಿ, ಫೆ. 8: ಹೆಚ್ಚುತ್ತಿರುವ ಅಪರಾಧಗಳು ಹಾಗೂ ಸಂವಿಧಾನ ಬದ್ಧ ಆಡಳಿತದ ವಿಫಲತೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಾಲಯದ ವೆಚ್ಚವನ್ನು ನಿಮ್ಮ ಮೇಲೆ ಹೇರಲಾಗುವುದು ಎಂದು ಸುಪ್ರೀಂ ಕೋರ್ಟ್ ದೂರುದಾರ-ವಕೀಲರಿಗೆ ಎಚ್ಚರಿಸಿತು. ಅಲ್ಲದೆ ಇತರ ರಾಜ್ಯಗಳ ಅಪರಾಧ ದಾಖಲೆಗಳ ಬಗ್ಗೆ ಸಂಶೋಧನೆ ನಡೆಸಿದ್ದೀರಾ ಎಂದು ಪ್ರಶ್ನಿಸಿತು. ಈ ಪ್ರತಿಪಾದನೆಗೆ ನೀವು ಯಾವುದೇ ರೀತಿಯ ಸಂಶೋಧನೆ ನಡೆಸಿಲ್ಲ ಎಂದು ದೂರುದಾರ ಹಾಗೂ ವಕೀಲ ಸಿ.ಆರ್. ಜಯ ಸುಕಿನ್‌ಗೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ , ವಿ. ರಾಮಸುಬ್ರಹ್ಮಣೀಯನ್ ಅವರಿದ್ದ ನ್ಯಾಯಪೀಠ, ನಿಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗಿರುವುದು ಹೇಗೆ ಎಂದು ಪ್ರಶ್ನಿಸಿದೆ. ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ (ಎನ್‌ಸಿಆರ್‌ಬಿ) ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ದತ್ತಾಂಶವನ್ನು ಉಲ್ಲೇಖಿಸಿದ ಸುಕಿನ್, ತಾನು ಸಂಶೋಧನೆ ನಡೆಸಿದ್ದೇನೆ. ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದರು.

‘‘ಎಷ್ಟು ರಾಜ್ಯಗಳ ಕ್ರೈಮ್ ರೆಕಾರ್ಡ್ ಅನ್ನು ನೀವು ಅಧ್ಯಯನ ನಡೆಸಿದ್ದೀರಿ? ಇತರ ರಾಜ್ಯಗಳ ಕ್ರೈಮ್ ರೆಕಾರ್ಡ್ ಅನ್ನು ನೀವು ಅಧ್ಯಯನ ನಡೆಸಿದ್ದೀರಾ? ಇತರ ರಾಜ್ಯಗಳ ಕ್ರೈಮ್ ರೆಕಾರ್ಡ್ ಬಗ್ಗೆ ನಿಮ್ಮ ಅಧ್ಯಯನ ಏನು ಹೇಳುತ್ತದೆ ?ಇದನ್ನು ನೀವು ಯಾವ ಆಧಾರದ ಮೇಲೆ ಹೇಳುತ್ತೀರಿ ಎಂಬುದನ್ನು ತೋರಿಸಿ’’ ಎಂದು ನ್ಯಾಯಪೀಠ ಹೇಳಿದೆ. ಇನ್ನಷ್ಟು ವಾದ ಮಂಡಿಸಿದರೆ, ನ್ಯಾಯಾಲಯದ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ ಎಂದು ಸುಕಿನ್ ಅವರಿಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್ ಮನವಿಯನ್ನು ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News