ಉದ್ಧವ್ ಠಾಕ್ರೆಯನ್ನು ಟೀಕಿಸಿದ ಬಿಜೆಪಿ ಕಾರ್ಯಕರ್ತನನ್ನು ಥಳಿಸಿದ ಶಿವಸೇನೆ ಕಾರ್ಯಕರ್ತರು

Update: 2021-02-08 17:56 GMT

ಪಂಢರಾಪುರ (ಮಹಾರಾಷ್ಟ್ರ),ಫೆ.8: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಟೀಕಿಸಿದ್ದಕ್ಕಾಗಿ ಕುಪಿತ ಶಿವಸೇನೆ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ಯತನ ಮೇಲೆ ದಾಳಿ ನಡೆಸಿದ ಘಟನೆ ಇಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 17 ಶಿವಸೈನಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಶಿರೀಷ್ ಕಾಟೆಕರ್ ಶನಿವಾರ ಪ್ರತಿಭಟನೆಯೊಂದರ ಸಂದರ್ಭ ಠಾಕ್ರೆ ವಿರುದ್ಧ ಟೀಕೆಗಳನ್ನು ಮಾಡಿದ್ದ. ಇದರಿಂದ ಕೆರಳಿದ್ದ ಶಿವಸೇನೆ ಕಾರ್ಯಕರ್ತರು ಆತನ ಮೈಮೇಲೆ ಮಸಿ ಎರಚಿ,ಸೀರೆಯನ್ನು ಉಡಿಸುವ ಪ್ರಯತ್ನವನ್ನೂ ಮಾಡಿದ್ದರು. ಆತನ ಕುತ್ತಿಗೆಗೆ ಬಳೆಗಳ ಮಾಲೆಯನ್ನು ತೊಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು.

ಇಲ್ಲಿಯ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿಯ ಕಚೇರಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ ಕೋವಿಡ್ ಲಾಕ್‌ಡೌನ್ ಸಂದರ್ಭದ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡುವಂತೆ ಆಗ್ರಹಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ್ದ ಕಾಟೆಕರ್, ಠಾಕ್ರೆಯವರನ್ನು ಟೀಕಿಸಿದ್ದರು. ಈ ಟೀಕೆಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆದ ಬಳಿಕ ಸ್ಥಳೀಯ ಶಿವಸೇನೆ ಕಾರ್ಯಕರ್ತರು ರೊಚ್ಚಿಗೆದ್ದಿದ್ದರು.

ಬಂಧಿತರನ್ನು ಸೋಮವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News