ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಯಾಕಿಲ್ಲ?!

Update: 2021-02-09 04:35 GMT

ಪರಿಶಿಷ್ಟ ಪಂಗಡದ ವಾಲ್ಮೀಕಿ/ ಪಾಳೇಗಾರ/ ನಾಯಕ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಬೇಕು ಎಂದು ಸುಮಾರು 5 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ! ಅದೇಕೋ ಪ್ರಯೋಜನ ಆಗುತ್ತಿಲ್ಲ. ನಾಯಕ ಸಮುದಾಯ ಯಾರನ್ನೂ ಭಿಕ್ಷೆ ಕೇಳುತ್ತಾ ಇಲ್ಲ. ಅದು ಸಂವಿಧಾನಬದ್ಧ ಹಕ್ಕು.

ಇದಕ್ಕಾಗಿ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಸಮುದಾಯ ಒತ್ತಾಯ ಮಾಡಿತ್ತು. ಸಮುದಾಯದ ಕೆಲವು ಪ್ರಮುಖರ ಒತ್ತಾಯಕ್ಕೆ ಮಣಿದು ಆಗಿನ ಸರಕಾರ (ಆಗಿನ ಸಿಎಂ ಸಿದ್ದರಾಮಯ್ಯ) ವಿಧಾನ ಸೌಧದ ಎದುರು ವಾಲ್ಮೀಕಿ ಪ್ರತಿಮೆ ನಿರ್ಮಿಸಿತು. ಆಗಲೇ ವಾಲ್ಮೀಕಿ ಅಥವಾ ಎಸ್ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಬೇಕು ಎಂದು ಬಲವಾಗಿ ಒತ್ತಾಯ ಮಾಡಲಾಯಿತು. ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಜೋರು ಮಳೆ! ಪ್ರತಿಮೆ ಅನಾವರಣ ಆಯ್ತು, ರಾಜ್ಯಾದ್ಯಂತ ಸಾವಿರಾರು ಜನ ಸೇರಿದ್ರು, ಆದರೆ ಮಳೆ ಬಂದ ಕಾರಣಕ್ಕೆ ಸುಗಮವಾಗಿ ನಡೆಯಬೇಕಿದ್ದ ಕಾರ್ಯಕ್ರಮ ಹಾಳಾಯಿತು. ಹೀಗಾಗಿ ಆ ಕಾರ್ಯಕ್ರಮ ಅರ್ಧಕ್ಕೇ ನಿಂತು ಹೋಯಿತು. ವಿಪರ್ಯಾಸ ಅಂದರೆ ಈ ಶೇ.7.5 ಮೀಸಲಾತಿ ಹೋರಾಟವೂ ಅದೇ ರೀತಿಯಾಗಿದೆ... ವಾಲ್ಮೀಕಿ ಸಮುದಾಯದ ಹಲವರು ಶ್ರಮವಹಿಸುತ್ತಾ ಇದ್ದರೂ ಪ್ರಯೋಜನವಾಗುತ್ತಿಲ್ಲ. ಸಿದ್ದರಾಮಯ್ಯ ನಂತರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಅವರನ್ನೂ ಸಮುದಾಯ ಒತ್ತಾಯ ಮಾಡಿ ಮೀಸಲಾತಿ ಕೊಡಿ ಎಂದು ದುಂಬಾಲು ಬಿತ್ತು. ಆಗ ಕುಮಾರಸ್ವಾಮಿ ಸರಕಾರ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು. ಈ ಸಮಿತಿ ಸಾಕಷ್ಟು ಅಧ್ಯಯನ ನಡೆಸಿ ಈಗ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರಕ್ಕೆ ನೀಡಿದೆ. ವರದಿಯಲ್ಲಿ ಎಸ್ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುವ ಬಗ್ಗೆಯೂ ಪ್ರಸ್ತಾಪಿಸಿದೆ. ಆದರೆ ಸರಕಾರ ಮಾತ್ರ ಈ ವರದಿ ಜಾರಿಗೆ ಮೀನಾಮೇಷ ಎಣಿಸಿ ಸಂಪುಟ ಉಪಸಮಿತಿ ರಚನೆ ಮಾಡಿದೆ. ಈ ಸಮಿತಿಯೂ ಈಗಾಗಲೇ ಸಭೆ ನಡೆಸಿ ಎಸ್ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುವ ಬಗ್ಗೆ ಸಮಾಲೋಚನೆ ಮಾಡಿದೆ; ಆದರೆ ವರದಿ ಜಾರಿಗೆ ತರುವ ಬಗ್ಗೆ ಮಾತ್ರ ಈ ಸಮಿತಿ ಚಕಾರ ಎತ್ತುತ್ತಿಲ್ಲ.

 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಸಮುದಾಯದ ಹಲವಾರು ಮುಖಂಡರು, ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಭೇಟಿ ಮಾಡಿ ಕೇಳುತ್ತಲೇ ಇದ್ದಾರೆ. ಹಲವು ಬಾರಿ ಪ್ರತಿಭಟನೆಗಳನ್ನು ಮಾಡಲಾಗಿದೆ. ಒಮ್ಮೆ ಇದೇ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆಯೂ ಆಗಿದೆ. ಆಗ ಸಚಿವರಾದ ಶ್ರೀರಾಮುಲು ಅವರೂ ಸೇರಿದಂತೆ ಸಮುದಾಯದ ಅನೇಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ... ಎಂದು ಎಚ್ಚರಿಸಿದ್ದರು. ಪಾಪ ಈಗ ಬಹುತೇಕರು ಆ ಮಾತು ಮರೆತಂತಿದೆ! ಇರಲಿ ಆದರೆ ಈಗ ಸನ್ಮಾನ್ಯ ಮುಖ್ಯಮಂತ್ರಿಗಳು ಮಾತ್ರ ಮೀಸಲಾತಿ ಜಾರಿ ಮಾಡುತ್ತೇವೆ, ವರದಿಯನ್ನು ಸಂಪುಟ ಉಪಸಮಿತಿಗೆ ನೀಡಿದ್ದೇವೆ, ಸಮಿತಿ ಚರ್ಚೆ ನಡೆಸಿ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

 ಸಮಿತಿ ಈಗ ಸಮಾಜ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಅವರ ನೇತೃತ್ವದಲ್ಲಿಯೇ ಇದೆ. ಶ್ರೀರಾಮುಲು ಅವರು ಕೂಡ ವಾಲ್ಮೀಕಿ ಸಮುದಾಯದ ಪ್ರಶ್ನಾತೀತ ನಾಯಕರು! ಆದರೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ಮಾತ್ರ ಜಾರಿಯಾಗುತ್ತಿಲ್ಲ!! ಯಾವುದೇ ವರದಿಯನ್ನು ಏಕಾಏಕಿ ಜಾರಿಗೊಳಿಸುವುದು ಅಸಾಧ್ಯ ನಿಜ. ಆದರೆ ಇಡೀ ರಾಜ್ಯದ ಜನ ಅಸಾಂವಿಧಾನಿಕವಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ಇದು ಸರಕಾರಕ್ಕೂ ಗೊತ್ತು. ಹೀಗಿದ್ದೂ ವಾಲ್ಮೀಕಿ ಸಮುದಾಯದ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ. ಇದರ ನಡುವೆ ಮತ್ತೊಂದು ಬೆಳವಣಿಗೆಗಳು ನಡೆದಿವೆ/ ನಡೆಯುತ್ತಿವೆ. ಬ್ರಾಹ್ಮಣ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ಕೇಳಲಾಯಿತು. ಅದು ಅವರ ಹಕ್ಕು; ಆದರೆ ತಕ್ಷಣ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಮಾಡಿ ಅಧ್ಯಕ್ಷರು, ಸದಸ್ಯರ ನೇಮಕ ಮಾಡಲಾಯಿತು. ನೃಪತುಂಗ ರಸ್ತೆಯಲ್ಲಿ ಕಚೇರಿಯನ್ನೂ ಕೊಟ್ಟಾಯಿತು. ಅದಾದ ಬಳಿಕ ಲಿಂಗಾಯತ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿಯ ಬೇಡಿಕೆ ಬಂತು; ಆ ಬೇಡಿಕೆಯೂ ತಕ್ಷಣಕ್ಕೇ ಆಯಿತು, ಸಂತೋಷ... ಈಗ ಕುರುಬ ಸಮುದಾಯದ ನಾಯಕರು ತಮ್ಮನ್ನು ಎಸ್ಟಿ ಸಮುದಾಯಕ್ಕೆ ಸೇರಿಸಿ ಎಂದು ಬೇಡಿಕೆ ಇಟ್ಟು ಪಾದಯಾತ್ರೆ ನಡೆಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಲಿಂಗಾಯತ ಸಮುದಾಯವನ್ನು 3Bಗೆ ಸೇರಿಸಲಾಗಿದೆ. ಪಂಚಮಸಾಲಿ ಸ್ವಾಮೀಜಿಗಳು ಈಗ 2Aಗೆ ಸೇರಿಸಬೇಕು ಎಂದು ಬೀದಿಗಿಳಿದಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ಕೊಡಲಿ ಎಂದು ಅದೇ ಸಮುದಾಯದ ಶ್ರೀಗಳು ಗುಡುಗಿದ ಕೂಡಲೇ ಇದರ ಬಗ್ಗೆ ರಾತ್ರೋರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರತಿಕ್ರಿಯೆ ನೀಡಿದರು. ಮತ್ತೊಂದು ಕಡೆ ಹಡಪದ/ ಸವಿತಾ ಸಮಾಜ, ನೇಕಾರರು, ಮೀಸಲಾತಿ ನೀಡಲು ಒತ್ತಾಯಿಸಿದ್ದು, ಅಭಿವೃದ್ಧಿ ಮಂಡಳಿಗೂ ಒತ್ತಡ ಹೇರುತ್ತಿದ್ದಾರೆ. ಇದು ಆಯಾ ಸಮುದಾಯಗಳು ತಮ್ಮ ಏಳಿಗೆಗೆ ಹಿಡಿದಿರುವ ಪಟ್ಟು.

 ಆದರೆ ಅನಾದಿಕಾಲದಿಂದ ಪಟ್ಟು ಹಿಡಿದು ಹೋರಾಟ ಮಾಡ್ತಾ ಬಂದಿರುವ ವಾಲ್ಮೀಕಿ ಸಮುದಾಯ ಈ ಎಲ್ಲ ಹೋರಾಟಗಳಲ್ಲಿ ಮರೆಯಾಗುತ್ತಿದೆಯೇ? ಅಥವಾ ಮರೆಯಾಗುವಂತೆ ಷಡ್ಯಂತ್ರ ರೂಪಿಸಲಾಗುತ್ತಿದೆಯೇ? ಈ ಪ್ರಶ್ನೆ ಈ ಸಮುದಾಯದ ನಡುವೆ ಎದ್ದಿದೆ. 5 ವರ್ಷಗಳಿಂದ ನಡೆಯುತ್ತಿರುವ ನಿರಂತರ ಹೋರಾಟವನ್ನು ಮಬ್ಬುಗೊಳಿಸುವ ತಂತ್ರಗಾರಿಕೆಯನ್ನು ಸ್ವತಃ ಸರಕಾರವೇ ಮಾಡುತ್ತಿರುವ ಬಗ್ಗೆ ಗುಮಾನಿ ಎದ್ದಿದೆ! ಸಮುದಾಯದ ಲಕ್ಷಾಂತರ ಜನತೆ ಸರಕಾರ ಶೇ.7.5 ಮೀಸಲಾತಿ ಜಾರಿಗೊಳಿಸಿ ಘೋಷಣೆ ಮಾಡುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಸರಕಾರದ ಮೇಲಿನ ಆ ನಿರೀಕ್ಷೆ ಹುಸಿಯಾಗುತ್ತಿದೆ. ಈ ಬಾರಿ ಕೂಡ ಅದೇ ನಿರೀಕ್ಷೆ ಅದೇ ಬೇಸರ, ಅದೇ ಹತಾಶೆೆ, ಮತ್ತೆ ಹತಾಶೆ... ಶೇ.7.5 ಮೀಸಲಾತಿ ಜಾರಿ ಸದ್ಯಕ್ಕಿಲ್ಲ...!

 ಮಗು ಅಳದೆ ತಾಯಿ ಕೂಡ ಹಾಲುಕುಡಿಸದ ವಿಪರ್ಯಾಸ ಕಾಲಘಟ್ಟದಲ್ಲಿ ನಾವಿದ್ದೇವೆ. ಕಾಯುವ ತಾಳ್ಮೆಗೂ ಒಂದು ಮಿತಿ ಇದೆ, ಸಹನೆ ಇದೆ, ಸಹನೆಯ ಕಟ್ಟೆಯೊಡೆದರೆ ಅನಾಹುತವಾಗಲಿದೆ ಎಂಬ ಪ್ರಜ್ಞಾಪೂರ್ವಕ ಎಚ್ಚರಿಕೆ ರಾಜ್ಯ ಸರಕಾರಕ್ಕೆ ಇರಬೇಕು. ಸಮುದಾಯದ ಎಲ್ಲ ಪಕ್ಷಗಳ ರಾಜಕೀಯ ನಾಯಕರಿಗೂ ಸರಕಾರ ದಿಕ್ಕು ತಪ್ಪಿಸುತ್ತಿರುವ ಈ ಹುನ್ನಾರದ ಬಗ್ಗೆ ಅರಿವಿರಬೇಕು. ಎಲ್ಲೋ ಒಂದು ಕಡೆ ಶೇ.7.5 ಮೀಸಲಾತಿ ಜಾರಿಯ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಈಗ ಕ್ರಾಂತಿಯೊಂದೇ ಉಳಿದಿರುವ ಪರಿಹಾರ ಮಾರ್ಗ ಎಂಬುದು ಸಮುದಾಯದ ಯುವ ಜನತೆಯ ಮನೋಭಾವ. ನಿರುದ್ಯೋಗ ನಿವಾರಣೆಯಾಗುತ್ತಿಲ್ಲ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಅನಕ್ಷರತೆ ಇನ್ನೂ ತಾಂಡವವಾಡುತ್ತಿದೆ. ಕಂದಾಚಾರಗಳೋ ಹೇಳತೀರದಾಗಿವೆ. ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಗ್ಯಾಸ್, ಪೆಟ್ರೋಲ್ ದರ ನಿತ್ಯವೂ ಗಗನಮುಖಿಯಾಗಿ ಏರುತ್ತಲೇ ಇದೆ! ಹೀಗಿರುವಾಗ ಎಸ್ಟಿ ಸಮುದಾಯದ ನಾಗರಿಕರು ಬದುಕು ನಡೆಸುವುದಕ್ಕೂ ಪರಿತಪಿಸುವ ಸ್ಥಿತಿಯಲ್ಲಿದ್ದಾರೆ. ಶೇ.7.5 ಮೀಸಲಾತಿಯಿಂದ ಇವುಗಳ ನಿವಾರಣೆಗೆ ಕಿಂಚಿತ್ತಾದರೂ ಸಹಾಯವಾಗಲಿದೆ ಎಂದು ಹೋರಾಟ ನಡೆಸಲಾಗುತ್ತಿದೆ; ಅದಕ್ಕೇ ಶೆ. 7.5 ಮೀಸಲಾತಿ ತುರ್ತಾಗಿ ಬೇಕಿದೆ.

Writer - ರಮೇಶ್ ಹಿರೇಜಂಬೂರು

contributor

Editor - ರಮೇಶ್ ಹಿರೇಜಂಬೂರು

contributor

Similar News