ಅಥ್ಲೀಟ್ ಹಿಮಾದಾಸ್‌ಗೆ ಅಸ್ಸಾಂ ಸರ್ಕಾರ ಗೌರವ

Update: 2021-02-11 04:39 GMT

ಗುವಾಹತಿ : ವಿಶ್ವಚಾಂಪಿಯನ್ ಸ್ಪ್ರಿಂಟರ್ ಹಿಮಾದಾಸ್ ಅವರನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪ ಅಧೀಕ್ಷಕಿ (ಡಿವೈಎಸ್ಪಿ) ಆಗಿ ನೇಮಕ ಮಾಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ನೇತೃತ್ವದ ಸಚಿವ ಸಂಪುಟ ನಿರ್ಧರಿಸಿದೆ.

ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕ್ರೀಡಾಪಟುಗಳನ್ನು ಕ್ಲಾಸ್-1 ಮತ್ತು ಕ್ಲಾಸ್-2 ಅಧಿಕಾರಿಗಳಾಗಿ ಪೊಲೀಸ್, ಅಬ್ಕಾರಿ, ಸಾರಿಗೆ ಹೀಗೆ ವಿವಿಧ ಇಲಾಖೆಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಸಮಗ್ರ ಕ್ರೀಡಾನೀತಿಗೆ ತಿದ್ದುಪಡಿ ತರುವ ನಿರ್ಣಯವನ್ನೂ ಸಭೆ ಆಂಗೀಕರಿಸಿತು ಎಂದು ಸರ್ಕಾರದ ವಕ್ತಾರ ಹಾಗೂ ಕೈಗಾರಿಕಾ ಸಚಿವ ಚಂದ್ರಮೋಹನ ಪಟೋವರಿ ಸುದ್ದಿಗಾರರಿಗೆ ತಿಳಿಸಿದರು.

ಹಿಮಾದಾಸ್ ಅವರನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ನೇಮಕ ಮಾಡಿಕೊಳ್ಳುವ ಜತೆಗೆ, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ವಿಜೇತರನ್ನು ಕ್ಲಾಸ್-1 ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಧಿಂಗ್ ಎಕ್ಸ್‌ಪ್ರೆಸ್ ಎಂದೇ ಖ್ಯಾತರಾಗಿರುವ ಹಿಮಾ ದಾಸ್ (20) ಭಾರತದ ಹೆಮ್ಮೆಯ ವೇಗದ ಓಟಗಾರ್ತಿ.

ಐಎಎಫ್ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊಟ್ಟಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News