ಪ್ರಧಾನಿ ಮೋದಿ ಕಣ್ಣೀರನ್ನು ʼಕಲಾತ್ಮಕವಾಗಿ ರಚಿಸಲ್ಪಟ್ಟ ಪ್ರದರ್ಶನʼ ಎಂದ ಶಶಿ ತರೂರ್‌

Update: 2021-02-11 06:21 GMT

ನವದೆಹಲಿ: ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಝಾದ್‌ ರವರ ರಾಜ್ಯಸಭಾ ಅವಧಿಯು ಮುಕ್ತಾಯಗೊಂಡಿರುವ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದ ಭಾವನಾತ್ಮಕ ವಿದಾಯ ಭಾಷಣವನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್ ಬುಧವಾರ "ಕಲಾತ್ಮಕವಾಗಿ ರಚಿಸಲ್ಪಟ್ಟ ಪ್ರದರ್ಶನ" ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕ ಆಝಾದ್ ರೊಂದಿಗಿನ ನಿಕಟ ಒಡನಾಟವನ್ನು ನೆನಪಿಸಿಕೊಂಡು ಪ್ರಧಾನಿ ಮಂಗಳವಾರ ರಾಜ್ಯಸಭೆಯಲ್ಲಿ ಹಲವಾರು ಬಾರಿ ಭಾವುಕರಾಗಿ ಕಣ್ಣೀರು ಹಾಕಿದ್ದರು.

ಮಾಜಿ ಉಪಾಧ್ಯಕ್ಷ ಹಮೀದ್ ಅನ್ಸಾರಿ ಅವರ "ಬೈ ಮೆನಿ ಎ ಹ್ಯಾಪಿ ಆಕ್ಸಿಡೆಂಟ್: ರಿಕಾಲೆಕ್ಷನ್ಸ್ ಆಫ್ ಎ ಲೈಫ್" ಪುಸ್ತಕದ ಚರ್ಚೆಯಲ್ಲಿ ಭಾಗವಹಿಸಿದ ಶಶಿ ತರೂರ್, "ಇದು (ಪ್ರಧಾನಮಂತ್ರಿಯವರ ವಿದಾಯ ಭಾಷಣ) ​​ಬಹಳ ಕಲಾತ್ಮಕವಾಗಿ ರಚಿಸಲಾದ ಪ್ರದರ್ಶನವಾಗಿದೆ" ಎಂದು ಹೇಳಿದರು.

"ಟಿಕಾಯತ್ ಅವರ ಕಣ್ಣೀರಿಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಕಣ್ಣೀರು ಹಾಕಿದ್ದಾರೆ" ಎಂದು ಶಶಿ ತರೂರ್, ರೈತ ಮುಖಂಡ ರಾಕೇಶ್ ಟಿಕಾಯತ್‌ ರನ್ನು ಉಲ್ಲೇಖಿಸಿ ಹೇಳಿದರು. ರಾಕೇಶ್‌ ಟಿಕಾಯತ್‌ ರೈತರ ಪ್ರತಿಭಟನೆಯ ವೇಳೆ ಕಣ್ಣೀರು ಹಾಕಿದ್ದರು. 

ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್ ಮುಖ್ಯಮಂತ್ರಿಗಳಾಗಿ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಪ್ರಧಾನಿ ಮೋದಿ ತಮ್ಮ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News