ಪ.ಬಂಗಾಳ: ಎಡರಂಗದ ಪ್ರತಿಭಟನೆ; ರಸ್ತೆ, ರೈಲು ಸಂಚಾರಕ್ಕೆ ತಡೆ, ಜನಜೀವನ ಅಸ್ತವ್ಯಸ್ತ

Update: 2021-02-12 16:31 GMT
ಫೋಟೊ ಕೃಪೆ: indianexpress

ಕೋಲ್ಕತಾ, ಫೆ.12: ಗುರುವಾರ ಪಕ್ಷದ ಕಾರ್ಯಕರ್ತರು ನಡೆಸಿದ ರ್ಯಾಲಿ ಸಂದರ್ಭ ಪೊಲೀಸರು ಲಾಠಿಚಾರ್ಜ್ ನಡೆಸಿ ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿರುವುದನ್ನು ವಿರೋಧಿಸಿ ಶುಕ್ರವಾರ ಎಡರಂಗ ಕರೆಕೊಟ್ಟಿದ್ದ 12 ಗಂಟೆ ಬಂದ್ ಪ್ರತಿಭಟನೆಯಿಂದ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಗುರುವಾರ ಎಡರಂಗಳ ಯುವಮೋರ್ಚ ಹಾಗೂ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ಉದ್ಯೋಗಕ್ಕೆ ಆಗ್ರಹಿಸಿ ಕೋಲ್ಕತಾದ ಕಾಲೇಜು ಸ್ಟ್ರೀಟ್‌ನಿಂದ ರಾಜ್ಯ ವಿಧಾನಸಭೆ ಕಾರ್ಯಾಲಯದವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ರ್ಯಾಲಿಗೆ ತಡೆಯೊಡ್ಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ಪ್ರತಿಭಟನಾಕಾರರು ಗಾಯಗೊಂಡಿದ್ದರು. ಅಲ್ಲದೆ ಹಲವರನ್ನು ಬಂಧಿಸಲಾಗಿತ್ತು.

ಇದನ್ನು ಖಂಡಿಸಿದ್ದ ಎಡರಂಗದ ಪಶ್ಚಿಮ ಬಂಗಾಳ ಅಧ್ಯಕ್ಷ ಬಿಮನ್ ಬೋಸ್ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ರಾಜ್ಯಬಂದ್‌ಗೆ ಕರೆ ನೀಡಿದ್ದರು. ಬಂದ್‌ಗೆ ಕಾಂಗ್ರೆಸ್ ಕೂಡಾ ಬೆಂಬಲ ಘೋಷಿಸಿತ್ತು.

ಕೋಲ್ಕತಾ ಸೇರಿದಂತೆ ರಾಜ್ಯದ ಹಲವೆಡೆ ರೈಲು ಮತ್ತು ರಸ್ತೆ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಕೋಲ್ಕತಾದಲ್ಲಿ ವಾಹನಗಳಿಗೆ ಹಾನಿ ಎಸಗಲಾಗಿದ್ದು ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಲಾಗಿದೆ. ನಗರದ ಶ್ಯಾಮಬಝಾರ್ ಬಳಿ ಟಯರ್ ಸುಟ್ಟು ರಸ್ತೆ ಸಂಚಾರಕ್ಕೆ ಅಡ್ಡಿಮಾಡಿದ ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರು ಪೊಲೀಸರಿಗೆ ಚಾಕೊಲೇಟ್ ಮತ್ತು ಗುಲಾಬಿ ಹೂ ನೀಡಿದರು ಎಂದು ವರದಿ ತಿಳಿಸಿದೆ. ಬಂದ್‌ಗೆ ಜನ ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಎಡರಂಗದ ಮುಖಂಡ ಸುಜನ್ ಚಕ್ರವರ್ತಿ ಹೇಳಿದ್ದಾರೆ. ಈ ಮಧ್ಯೆ ಬಂದ್ ಕರೆಯನ್ನು ವಿರೋಧಿಸಿದ್ದ ಪಶ್ಚಿಮ ಬಂಗಾಳ ಸರಕಾರ, ಶುಕ್ರವಾರ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸರಕಾರಿ ಸಿಬಂದಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಇದನ್ನು ಉಲ್ಲಂಘಿಸಿದರೆ ವೇತನ ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News