ಭಾರತವು ಚೀನಾಕ್ಕೆ ಯಾವುದೇ ಭೂಪ್ರದೇಶ ಒಪ್ಪಿಸಿಲ್ಲ:ಕೇಂದ್ರ

Update: 2021-02-12 16:24 GMT

ಹೊಸದಿಲ್ಲಿ,ಫೆ.12: ಭಾರತವು ಚೀನಾಕ್ಕೆ ತನ್ನ ಯಾವುದೇ ಭೂಪ್ರದೇಶವನ್ನು ಬಿಟ್ಟುಕೊಟ್ಟಿಲ್ಲ ಮತ್ತು ಇನ್ನೂ ಬಗೆಹರಿಯಬೇಕಾದ ಕೆಲವು ಭಿನ್ನಾಭಿಪ್ರಾಯಗಳು ಉಭಯ ದೇಶಗಳ ನಡುವೆ ಉಳಿದುಕೊಂಡಿವೆ ಎಂದು ರಕ್ಷಣಾ ಸಚಿವಾಲಯವು ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಲಡಾಖ್‌ನಲ್ಲಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ ಸೇನೆ ವಾಪಸಾತಿ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಶ್ನೆಗಳನ್ನೆತ್ತಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಓರ್ವ ಹೇಡಿ ಮತ್ತು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಒಪ್ಪಿಸಿದ್ದಾರೆ ಎಂದೂ ರಾಹುಲ್ ಆರೋಪಿಸಿದ್ದರು.

ಉಭಯ ದೇಶಗಳ ನಡುವೆ ಒಪ್ಪಂದವಾಗಿದ್ದು,ಭಾರತವು ತನ್ನ ಯಾವುದೇ ಭೂಪ್ರದೇಶವನ್ನು ಬಿಟ್ಟುಕೊಟ್ಟಿಲ್ಲ. ಬದಲಿಗೆ ಅದು ಎಲ್‌ಎಸಿಯನ್ನು ಪಾಲಿಸಿದ್ದು,ಅದನ್ನು ಗೌರವಿಸಿದೆ ಹಾಗೂ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯನ್ನು ತಡೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯೂ ಹಾಟ್ ಸ್ಪ್ರಿಂಗ್ಸ್,ಗೋಗ್ರಾ ಮತ್ತು ಡೆಸ್ಪಾಂಗ್ ಸೇರಿದಂತೆ ಬಗೆಹರಿಯಬೇಕಾದ ಸಮಸ್ಯೆಗಳು ಉಳಿದುಕೊಂಡಿವೆ ಎಂದು ಸ್ಪಷ್ಟಪಡಿಸಿದೆ. ಪ್ಯಾಂಗಾಂಗ್ ತ್ಸೋ ಪ್ರದೇಶದಿಂದ ಸೇನಾ ವಾಪಸಾತಿ ಪೂರ್ಣಗೊಂಡ 48 ಗಂಟೆಗಳಲ್ಲಿ ಈ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಭೂಪ್ರದೇಶಕ್ಕೆ ಸಂಬಂಧಿಸಿದ ತಪ್ಪುಗ್ರಹಿಕೆಗಳ ಬಗ್ಗೆಯೂ ಸಚಿವಾಲಯವು ಸ್ಪಷ್ಟನೆಯನ್ನು ನೀಡಿದೆ. ಭಾರತದ ನಕಾಶೆಯಲ್ಲಿ ಭಾರತೀಯ ಭೂಪ್ರದೇಶವನ್ನು ಬಿಂಬಿಸಲಾಗಿದ್ದು ಅದು 1962ರಿಂದಲೂ ಚೀನಾ ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿರುವ 43,000 ಚದರ ಕಿ.ಮೀ.ಗೂ ಹೆಚ್ಚಿನ ಭೂಪ್ರದೇಶವನ್ನು ಒಳಗೊಂಡಿದೆ. ಭಾರತದ ಗ್ರಹಿಕೆಯಂತೆ ಎಲ್‌ಎಸಿಯು ಫಿಂಗರ್ 8ರಲ್ಲಿದೆಯೇ ಹೊರತು ಫಿಂಗರ್ 4ರಲ್ಲಿ ಅಲ್ಲ. ಇದೇ ಕಾರಣದಿಂದ ಭಾರತವು ಚೀನಾದೊಂದಿಗೆ ಹಾಲಿ ಒಡಂಬಡಿಕೆ ಸೇರಿದಂತೆ ಫಿಂಗರ್ 8ರವರೆಗೆ ಗಸ್ತು ನಿರ್ವಹಿಸುವ ಹಕ್ಕನ್ನು ನಿರಂತರವಾಗಿ ಕಾಯ್ದುಕೊಂಡಿದೆ ಎಂದು ಅದು ವಿವರಿಸಿದೆ.

 ಗಡಿಯ ತನ್ನ ಪಾರ್ಶ್ವದಿಂದ ಫಿಂಗರ್ ನಾಲ್ಕರ ಪೂರ್ವದ ಪ್ರದೇಶಗಳಿಗೆ ರಸ್ತೆಗಳಿರಲಿಲ್ಲವಾದ್ದರಿಂದ ಭಾರತವು ಹಿಂದೆ ಫಿಂಗರ್ 8ರವರೆಗೆ ಕಾಲ್ನಡಿಗೆಯಲ್ಲಿ ಗಸ್ತು ಕಾರ್ಯವನ್ನು ನಿರ್ವಹಿಸುತ್ತಿತ್ತು. ತನ್ಮಧ್ಯೆ ಚೀನಾ ಫಿಂಗರ್ 4ರವರೆಗೆ ತನ್ನ ಪ್ರಾಬಲ್ಯವನ್ನು ಸಾಧಿಸಿದೆ ಮತ್ತು ಅಲ್ಲಿ ರಸ್ತೆಯೊಂದನ್ನು ನಿರ್ಮಿಸಿದೆ. ಕಳೆದ ವರ್ಷ ಭಾರತೀಯ ಯೋಧರು ಫಿಂಗರ್ 8ನ್ನು ತಲುಪುವುದನ್ನು ಚೀನಿ ಸೇನೆಯು ತಡೆದಿದ್ದು,ಇದು ಉಭಯ ದೇಶಗಳ ನಡುವೆ ತಿಂಗಳುಗಳ ಕಾಲ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ದಂಡೆಯ ಎರಡೂ ಪಾರ್ಶ್ವಗಳಲ್ಲಿಯ ಖಾಯಂ ನೆಲೆಗಳು ದೀರ್ಘಕಾಲದಿಂದ ಅಸ್ತಿತ್ವದಲ್ಲಿವೆ. ಭಾರತೀಯ ಪಾರ್ಶ್ವದಲ್ಲಿ ಅದು ಫಿಂಗರ್ 3ರ ಬಳಿಯ ಧನಸಿಂಗ್ ಥಾಪಾ ಆಗಿದ್ದರೆ,ಚೀನಾದ ಪಾರ್ಶ್ವದಲ್ಲಿ ಫಿಂಗರ್‌8ರ ಪೂರ್ವದಲ್ಲಿದೆ. ಪ್ರಚಲಿತ ಒಡಂಬಡಿಕೆಯಂತೆ ಉಭಯ ದೇಶಗಳು ಮುಂಚೂಣಿ ಪ್ರದೇಶಗಳಲ್ಲಿ ಪಡೆಗಳ ನಿಯೋಜನೆಯನ್ನು ಅಂತ್ಯಗೊಳಿಸುತ್ತವೆ ಮತ್ತು ಈ ಖಾಯಂ ನೆಲೆಗಳಲ್ಲಿ ನಿಯೋಜನೆಯು ಮುಂದುವರಿಯುತ್ತದೆ ಎಂದೂ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News