×
Ad

ಕೇಂದ್ರ ಸರಕಾರ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ: ಕಾಂಗ್ರೆಸ್

Update: 2021-02-12 22:10 IST

ಹೊಸದಿಲ್ಲಿ, ಫೆ. 12: ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಭಾರತದ ಹಾಗೂ ಚೀನಾ ಪಡೆಗಳ ನಡುವಿನ ಸೇನೆ ಹಿಂತೆಗೆತ ಪ್ರಕ್ರಿಯೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಕೇಂದ್ರ ಸರಕಾರ ರಾಷ್ಟ್ರೀಯ ಭದ್ರತೆ ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದೆ.

ಸಂಸತ್ತಿನಲ್ಲಿ ರಾಜನಾಥ್ ಸಿಂಗ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, 2020 ಎಪ್ರಿಲ್‌ನಲ್ಲಿ ಚೀನಾ ಅಪ್ರಚೋದಿತವಾಗಿ ಭಾರತದ ಭೂಭಾಗದ ಒಳಗೆ ನುಸುಳಿತು ಹಾಗೂ ಸೇನಾ ಜಮಾವಣೆಯನ್ನು ಆರಂಭಿಸಿತು. ಆದುದರಿಂದ 2020 ಎಪ್ರಿಲ್‌ಗಿಂತ ಮೊದಲಿನ ಪರಿಸ್ಥಿತಿ ಯಾವಾಗ ನೆಲಸಲಿದೆ ಎಂಬ ಬಗ್ಗೆ ಚೀನಾ ಭರವಸೆ ನೀಡದ ಹೊರತಾಗಿಯು ಲಡಾಕ್‌ನಲ್ಲಿ ಸೇನಾ ಪಡೆಯನ್ನು ಕೇಂದ್ರ ಸರಕಾರ ಹಿಂದೆಗೆದುಕೊಂಡಿದೆ ಎಂದು ಆರೋಪಿಸಿದರು.

ಭಾರತದ ಪ್ರಾದೇಶಿಕ ರಕ್ಷಣೆಯಲ್ಲಿ ತಮ್ಮ ಸಂಪೂರ್ಣ ಹಾಗೂ ಒಟ್ಟು ವಿಫಲತೆಯ ಬಗ್ಗೆ ಪ್ರಧಾನಿ ಹಾಗೂ ರಕ್ಷಣಾ ಸಚಿವರು ವಿವರಿಸಬಲ್ಲರೇ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ‘‘ಮೋದಿ ಸರಕಾರ ರಾಷ್ಟ್ರೀಯ ಭದ್ರತೆ ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆ ಬಗ್ಗೆ ಲಜ್ಜೆ ಕಳೆದುಕೊಂಡು ರಾಜಿ ಮಾಡಿಕೊಂಡಿದೆ. ಪೂರ್ವ ಲಡಾಕ್‌ನಲ್ಲಿ ಚೀನಾ ಒಳ ನುಸುಳುವಿಕೆಯ ಕುರಿತು ಇಂದು ರಾಜ್ಯ ಸಭೆಯಲ್ಲಿ ರಕ್ಷಣಾ ಸಚಿವರು ನೀಡಿದ ಹೇಳಿಕೆಯಿಂದ ಇದು ಸ್ಪಷ್ಟವಾಗಿದೆ’’ ಎಂದು ಸುರ್ಜೇವಾಲ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News