ಸಂಸ್ಕೃತಿಯ ಕೊಡುಕೊಳು್ಳವಿಕೆ ಪ್ರವೃತ್ತಿ ಕುಂದಿದೆ: ಬಿ.ಜಯಶ್ರೀ

Update: 2021-02-13 16:30 GMT

ಉಡುಪಿ, ಫೆ.13: ಉಡುಪಿ ರಂಗಭೂಮಿ ವತಿಯಿಂದ ಹಿರಿಯ ರಂಗ ಕರ್ಮಿ ಪದ್ಮಶ್ರೀ ಬಿ.ಜಯಶ್ರೀ ಅವರಿಗೆ ರಂಗ ಸಾಮ್ರಾಜ್ಞಿ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿಯನ್ನು ಇಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರದಾನ ಮಾಡಲಾಯಿತು.

ಬಳಿಕ ಮಾತನಾಡಿದ ಜಯಶ್ರೀ, ಈ ಪ್ರಶಸ್ತಿಯನ್ನು ನನ್ನನ್ನು ಬೆಳೆಸಿದ ಪ್ರಕೃತಿ ಮಾತೆ, ಕಲಾವಿದೆ, ಪ್ರೇಕ್ಷಕರಿಗೆ ಅರ್ಪಿಸುತ್ತೇನೆ. ಈ ಹಿಂದೆ ಇದ್ದು ಸಂಸ್ಕೃತಿಯ ಕೊಡು ಕೊಳ್ಳುವಿಕೆಯ ಪ್ರವೃತ್ತಿ ಈಗ ಇಲ್ಲವಾಗಿದೆ. ಇಲ್ಲಿನ ಕಲಾವಿದರು ನಮ್ಮಲ್ಲಿಗೆ ಮತ್ತು ನಾವು ಇಲ್ಲಿಗೆ ಬರುತ್ತಿದ್ದೇವು. ಈ ಮೂಲಕ ಪರಸ್ಪರ ಸಂಸ್ಕೃತಿಯ ಪರಿಚಯ ಆಗುತ್ತಿತ್ತು. ಆದರೆ ಈಗ ಆ ಕಾರ್ಯ ಆಗುತ್ತಿಲ್ಲ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಯಶ್ರೀ ಅವರಿಗೆ ಪ್ರಶಸ್ತಿ ನೀಡಿರುವುದರಿಂದ ರಂಗಭೂಮಿ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾಟಕದ ಮೂಲಕ ಮೂಗುದಾರ ಹಾಕಿಲಾಗಿದ್ದು, ಇದು ನಾಟಕದ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅಭಿನಂದನಾ ಭಾಷಣ ಮಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ ಆರ್., ಹಿರಿಯ ಕಲಾ ನಿರ್ದೇಶಕ ಶಶಿಧರ ಅಡಪ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು.

ರಂಗಭೂಮಿ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು. ಸದಸ್ಯ ಶ್ರೀಪಾದ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ವಿಜೇತ ಎಎಸ್ಸೈ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಎಂ.ನಂದಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಜೀವಾ ತಂಡದಿಂದ ರಂಗಗೀತೆಗಳು ಜರಗಿದವು. ಕಾರ್ಯಕ್ರಮದ ನಂತರ ಮಂಗಳೂರು ಆಯನ ಮನೆ ತಂಡದಿಂದ ದ್ವೀಪ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News