ಮಂಗಳೂರು: ​ಬಿಟ್ ಕಾಯಿನ್ ಹೂಡಿಕೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ; ಆರೋಪಿ ಸೆರೆ

Update: 2021-02-13 16:54 GMT
ಅಬ್ದುಲ್ ಲತೀಫ್ 

ಮಂಗಳೂರು, ಫೆ.13: ‘ಬಿಟ್ ಕಾಯಿನ್ ಕ್ರಿಪ್ಟೊ ಕರೆನ್ಸಿ’ ಕಂಪೆನಿಯ ಅಡ್ಮಿನ್ ಎಂದು ಹೇಳಿಕೊಂಡು ಲಕ್ಷಾಂತರ ರೂ. ವಂಚನೆ ಆರೋಪ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ಅಮ್ಮುಂಜೆ ನಿವಾಸಿ ಅಬ್ದುಲ್ ಲತೀಫ್ ಕಲಾಯಿ (34) ಬಂಧಿತ ಆರೋಪಿ ಎಂದು ತಿಳಿದುಬಂದಿದ್ದು, ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಬಂಧಿತ ಆರೋಪಿ ಅಬ್ದುಲ್ ಲತೀಫ್ ಎಂಬವರು ‘ಬಿಟ್ ಕಾಯಿನ್ ಕ್ರಿಪ್ಟೊ ಕರೆನ್ಸಿ’ ಎಂಬ ಕಂಪೆನಿಯ ವೆಬ್‌ಸೈಟ್‌ನ ಅಡ್ಮಿನ್ ಎಂದು ಹೇಳಿಕೊಂಡು ಹಲವರಿಂದ ಹಣ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ. 2018ರ ಜನವರಿ 3ರಂದು ಈ ಕಂಪೆನಿಗೆ ಮಂಗಳೂರು ಮೂಲದ ವ್ಯಕ್ತಿಯಿಂದ 46 ಲಕ್ಷ ರೂ. ಬಂಡವಾಳ ತೊಡಗಿಸಿಕೊಂಡಿದ್ದಾರೆ. 46 ಲಕ್ಷ ರೂ. ಪೈಕಿ 10 ಲಕ್ಷ ರೂ.ನ್ನು ಹಿಂದಿರುಗಿಸಿದ್ದು, ಇನ್ನುಳಿದ 36 ಲಕ್ಷ ರೂ.ನ್ನು ವಾಪಸ್ ಮಾಡದೇ ವಂಚಿಸಿದ್ದಾರೆ. ಆರೋಪಿಯು ಇದೇ ರೀತಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಂಪೆನಿಗೆ ತೊಡಗಿಸುತ್ತಾ ಸಾವಿರಾರು ಜನರಿಗೆ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಬಗ್ಗೆ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News