ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿ ಭಾರತ ಮೂಲದ ಅರೋರಾ ಆಕಾಂಕ್ಷಾ ಘೋಷಣೆ

Update: 2021-02-13 18:35 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಫೆ. 13: ವಿಶ್ವಸಂಸ್ಥೆಯ ಮುಂದಿನ ಮಹಾಕಾರ್ಯದರ್ಶಿ ಹುದ್ದೆಗೆ ನಾನು ಅಭ್ಯರ್ಥಿಯಾಗಿದ್ದೇನೆ ಎಂದು ಭಾರತ ಮೂಲದ ವಿಶ್ವಸಂಸ್ಥೆ ಉದ್ಯೋಗಿ ಅರೋರಾ ಆಕಾಂಕ್ಷಾ ಘೋಷಿಸಿದ್ದಾರೆ.

ಹಾಲಿ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ರ ಪ್ರಸಕ್ತ ಐದು ವರ್ಷಗಳ ಅವಧಿ 2022 ಜನವರಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಎರಡನೇ ಅವಧಿಗೆ ಸ್ಪರ್ಧಿಸುವ ಇಂಗಿತವನ್ನು ಅವರು ಈಗಾಗಲೇ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ದಲ್ಲಿ ಆಡಿಟ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿರುವ 34 ವರ್ಷದ ಅರೋರಾ, ಈ ತಿಂಗಳು ತನ್ನ ಮಹಾಕಾರ್ಯದರ್ಶಿ ಅಭಿಯಾನವನ್ನು ಆರಂಭಿಸಿದ್ದಾರೆ.

‘‘ಜಗತ್ತಿಗೆ ನೀಡಿದ ವಾಗ್ದಾನವನ್ನು ವಿಶ್ವಸಂಸ್ಥೆಯು 75 ವರ್ಷಗಳ ಕಾಲ ಈಡೇರಿಸಿಲ್ಲ. ನಿರಾಶ್ರಿತರನ್ನು ರಕ್ಷಿಸಲಾಗಿಲ್ಲ, ಮಾನವೀಯ ನೆರವು ಕನಿಷ್ಠ ಮಟ್ಟದಲ್ಲಿದೆ ಹಾಗೂ ತಂತ್ರಜ್ಞಾನ ಮತ್ತು ಹೊಸತನಕ್ಕೆ ತಿಲಾಂಜಲಿ ನೀಡಲಾಗಿದೆ’’ ಎಂದು ಅವರು ಹೇಳಿದರು.

‘‘ಅದಕ್ಕಾಗಿ ನಾನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ. ವಿಶ್ವಸಂಸ್ಥೆಯು ಪಕ್ಕದಲ್ಲಿ ನಿಂತುಕೊಳ್ಳುವ ಪಾತ್ರವನ್ನು ನಿರ್ವಹಿಸುವುದನ್ನು ನಾನು ಬಯಸುವುದಿಲ್ಲ’’ ಎಂದು ಅವರು ವೀಡಿಯೊ ಒಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News