ಗ್ರೆಟಾ ಥನ್‌ಬರ್ಗ್ ಟೂಲ್ ಕಿಟ್ ಪ್ರಕರಣ: ಬೆಂಗಳೂರು ಮೂಲದ ಯುವ ಪರಿಸರವಾದಿ ಬಂಧನ

Update: 2021-02-14 18:16 GMT

ಬೆಂಗಳೂರು, ಫೆ.14: ಅಂತರ್‌ರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಟೂಲ್ ಕಿಟ್ ಪ್ರಕರಣ ಸಂಬಂಧ ಬೆಂಗಳೂರು ಮೂಲದ ಯುವ ಪರಿಸರವಾದಿಯನ್ನು ಹೊಸದಿಲ್ಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ದಿಶಾ ರವಿ ಬಂಧಿತ ಪರಿಸರವಾದಿ ಆಗಿದ್ದು, ಈಕೆ ‘ಫ್ರೈಡೇಸ್ ಫಾರ್ ಫ್ಯೂಚರ್’ ಅಭಿಯಾನದ ಸಹ ಸ್ಥಾಪಕಿಯೂ ಹೌದು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಈ ತಿಂಗಳ ಆರಂಭದಲ್ಲಿ ಟೂಲ್ ಕಿಟ್ ಅನ್ನು ಟ್ವೀಟ್ ಮಾಡಿದ್ದರು. ಈ ಟ್ವಿಟ್ ಜಾಗತಿಕ ಗಮನ ಸೆಳೆದ ಬೆನ್ನಲ್ಲೇ, ವಿವಾದವೂ ಅಂಟಿಕೊಂಡಿದೆ ಎಂದು ಆರೋಪಿಸಿ ಫೆ.4ರಂದು ಹೊಸದಿಲ್ಲಿ ಅಪರಾಧ ವಿಭಾಗದ ಪೊಲೀಸರು ಟೂಲ್ ಕಿಟ್ ಬಗ್ಗೆ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ತನಿಖೆ ನಡೆಸಿರುವ ಹೊಸದಿಲ್ಲಿ ಅಪರಾಧ ವಿಭಾಗದ ಪೊಲೀಸರು, ರೈತರ ಪ್ರತಿಭಟನೆ ವೇಳೆ ಗಲಭೆಗೆ ಕುಮ್ಮಕ್ಕು ನೀಡಿದ್ದಾರೆ ಮತ್ತು ಹಿಂಸಾಚಾರದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚೋದನೆ ನೀಡಿದ್ದಾರೆಂಬ ಆರೋಪದಡಿ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿಶಾ ರವಿ ಅವರನ್ನು ಬಂಧಿಸಿದ್ದಾರೆ.

ಬಂಧಿತ ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಐಪಿಸಿ ಸೆಕ್ಷನ್ 124 ಎ, 120ಎ ಹಾಗೂ 153 ಎ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

7 ದಿನ ಪೊಲೀಸ್ ಕಸ್ಟಡಿಗೆ: ಆರೋಪಿಯನ್ನು ಬಂಧಿಸಿರುವುದಾಗಿ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪ ಪೊಲೀಸ್ ಆಯುಕ್ತರಿಗೆ ಪ್ರಾಥಮಿಕ ಮಾಹಿತಿ ನೀಡಿದ ಹೊಸದಿಲ್ಲಿ ಅಪರಾಧ ವಿಭಾಗದ ಪೊಲೀಸರು, ಆನಂತರ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ದಿಶಾ ಅವರನ್ನು 7 ದಿನಗಳ ಕಾಲ ಪೊಲೀಸರ ವಿಶೇಷ ಸೆಲ್ ಕಸ್ಟಡಿಗೆ ಒಪ್ಪಿಸಿದೆ ಎಂದು ತಿಳಿದುಬಂದಿದೆ.

ಯಾರು ದಿಶಾ ರವಿ?: ಬೆಂಗಳೂರಿನ ವಸಂತ ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಬಿಎ ಪದವಿ ಪೂರೈಸಿದ್ದ ದಿಶಾ ರವಿ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಸೋಲದೇವನಹಳ್ಳಿ ಬಳಿಯಿರುವ ತನ್ನ ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು. ದಿಶಾ ರವಿ ಅವರ ತಂದೆ ಅಥ್ಲೆಟಿಕ್ ಕೋಚ್ ಆಗಿದ್ದು, ಮೈಸೂರಿನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು, 2018ನೇ ಸಾಲಿನಲ್ಲಿ ಜಾಗತಿಕ ಮಟ್ಟ ದಲ್ಲಿ ಹವಾಮಾನ ಬದಲಾವಣೆ ಕುರಿತು ಬಹು ದೊಡ್ಡ ಹೋರಾಟವನ್ನು ಹುಟ್ಟು ಹಾಕಿದ್ದ ಫ್ರೈಡೇಸ್ ಫಾರ್ ಫ್ಯೂಚರ್ ಸಂಸ್ಥೆಯ ಸಹ ಸ್ಥಾಪಕಿ ಯಾಗಿದ್ದಳು ದಿಶಾ ರವಿ.

ಹವಾಮಾನ ಬದಲಾವಣೆ ಕುರಿತು ಜಾಗತಿಕ ಹೋರಾಟಕ್ಕೆ ಸ್ವೀಡನ್‌ನ ಗ್ರೇಟಾ ಥನ್‌ಬರ್ಗ್ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಇದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಹವಾಮಾನ ವೈಪರೀತ್ಯ ಕುರಿತು ಬಹುದೊಡ್ಡ ಜಾಗೃತಿ ಅಭಿಯಾನಕ್ಕೆ ನಾಂದಿಯಾಗಿತ್ತು. ಹೀಗಾಗಿ ಗ್ರೇಟಾ ಥನ್‌ಬರ್ಗ್ ಹಾಗೂ ದಿಶಾ ರವಿಗೂ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News