ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಗಾಝಿಪುರಕ್ಕೆ ಆಗಮಿಸಿದ ಮಹಾತ್ಮ ಗಾಂಧಿ ಮೊಮ್ಮಗಳು

Update: 2021-02-14 18:23 GMT

ಗಾಝಿಯಾಬಾದ್, ಫೆ. 14: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಲು ಮಹಾತ್ಮಾ ಗಾಂಧಿ ಅವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಜಿ ಅವರು ದಿಲ್ಲಿ-ಉತ್ತರಪ್ರದೇಶದ ಗಾಝಿಪುರಕ್ಕೆ ಶನಿವಾರ ಭೇಟಿ ನೀಡಿದರು.

ರಾಷ್ಟ್ರೀಯ ಗಾಂಧಿ ವಸ್ತು ಸಂಗ್ರಹಾಲಯದ ಅಧ್ಯಕ್ಷರೂ ಆಗಿರುವ 84ರ ಹರೆಯದ ಭಟ್ಟಾಚಾರ್ಜಿ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ರೈತರಿಗೆ ಸಲಹೆ ನೀಡಿದರು. ಅಲ್ಲದೆ, ರೈತ ಸಮುದಾಯದ ಬಗ್ಗೆ ಕಾಳಜಿ ವಹಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು ಎಂದು ಭಾರತೀಯ ಕಿಸಾನ್ ಒಕ್ಕೂಟದ ಹೇಳಿಕೆ ತಿಳಿಸಿದೆ. ಅವರೊಂದಿಗೆ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ರಾಮಚಂದ್ರ ರಾಹಿ, ಅಖಿಲ ಭಾರತ ಸರ್ವ ಸೇವಾ ಸಂಘದ ಆಡಳಿತ ಟ್ರಸ್ಟಿ ಅಶೋಕ್ ಶರಣ್, ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಸಂಜಯ್ ಸಿಂಗ್ ಹಾಗೂ ರಾಷ್ಟ್ರೀಯ ಗಾಂಧಿ ವಸ್ತು ಸಂಗ್ರಹಾಲಯದ ನಿರ್ದೇಶಕ ಎ. ಅನ್ನಾಮಲೈ ಮೊದಲಾದವರು ಇದ್ದರು.

ನಾವು ಯಾವುದೇ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಇಲ್ಲಿಗೆ ಆಗಮಿಸಿಲ್ಲ. ನಮ್ಮ ಬದುಕನ್ನು ಪೋಷಿಸುತ್ತಿರುವ ರೈತರಿಗಾಗಿ ನಾವು ಇಂದು ಇಲ್ಲಿಗೆ ಬಂದಿದ್ದೇವೆ ಎಂದು ಭಟ್ಟಾಚಾರ್ಜಿ ಹೇಳಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

‘‘ನಿಮ್ಮೆಲ್ಲರಿಂದಾಗಿ ನಾವಿದ್ದೇವೆ. ರೈತರಿಗೆ ಒಳಿತಾದಲ್ಲಿ ದೇಶಕ್ಕೆ ಹಾಗೂ ನಮ್ಮಲ್ಲರಿಗೆ ಒಳಿತಾಗಲಿದೆ’’ ಎಂದು ನವೆಂಬರ್‌ನಿಂದ ಗಾಝಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಟ್ಟಾಚಾರ್ಯ ಹೇಳಿರುವುದಾಗಿ ಹೇಳಿಕೆ ತಿಳಿಸಿದೆ.

ತಾನು ರೈತರಿಗಾಗಿ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಆಗಮಿಸಿರುವುದಾಗಿ ಭಟ್ಟಾಚಾರ್ಜಿ ಅವರು ಹೇಳಿರುವುದಾಗಿ ಭಾರತೀಯ ಕಿಸಾನ್ ಒಕ್ಕೂಟದ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲ್ಲಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News