ರಾಜ್ಯದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಎಂದಿಗೂ ಸಿಎಎ ಜಾರಿ ಮಾಡುವುದಿಲ್ಲ: ರಾಹುಲ್‌ ಗಾಂಧಿ

Update: 2021-02-14 18:27 GMT

ಗುವಾಹಟಿ, ಫೆ.14: ಕಾಂಗ್ರೆಸ್ ಪಕ್ಷ ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಅಸ್ಸಾಂ ಒಪ್ಪಂದದ ಎಲ್ಲಾ ಅಂಶಗಳನ್ನೂ ರಕ್ಷಿಸುತ್ತದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಮಾರ್ಚ್-ಎಪ್ರಿಲ್‌ನಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಶಿವಸಾಗರದಲ್ಲಿ ರವಿವಾರ ಆಯೋಜಿಸಲಾದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ಬಿಜೆಪಿ ಮತ್ತು ಆರೆಸ್ಸೆಸ್ ಅಸ್ಸಾಂ ರಾಜ್ಯವನ್ನು ವಿಭಜಿಸುತ್ತಿವೆ ಎಂದು ಆರೋಪಿಸಿದರು. ಅಸ್ಸಾಂಗೆ ನಾಗಪುರ ಅಥವಾ ದಿಲ್ಲಿಯವರ ಮಾತು ಮಾತ್ರ ಕೇಳುವ ಮುಖ್ಯಮಂತ್ರಿಯ ಬದಲು ಜನರ ಅಹವಾಲು ಆಲಿಸುವ, ಇಲ್ಲಿಯವರೇ ಆಗಿರುವ ಮುಖ್ಯಮಂತ್ರಿಯ ಅಗತ್ಯವಿದೆ . ರಿಮೋಟ್ ಕಂಟ್ರೋಲ್ ಮೂಲಕ ಟಿವಿಯನ್ನು ನಿರ್ವಹಿಸಬಹುದು. ಆದರೆ ಮುಖ್ಯಮಂತ್ರಿಯನ್ನಲ್ಲ. ಅಸ್ಸಾಂ ಯವಕರಿಗೆ ಉದ್ಯೋಗ ಒದಗಿಸುವ ಮುಖ್ಯಮಂತ್ರಿಯ ಅಗತ್ಯವಿದೆ ಎಂದರು.

ಅಸ್ಸಾಂ ಒಪ್ಪಂದದಿಂದಾಗಿ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಸ್ಸಾಂ ಒಪ್ಪಂದದ ಎಲ್ಲಾ ಅಂಶಗಳನ್ನೂ ಪಾಲಿಸಲಾಗುತ್ತದೆ. ಅಕ್ರಮ ವಲಸಿಗರ ವಿಷಯ ರಾಜ್ಯದಲ್ಲಿರುವ ಅತೀ ದೊಡ್ಡ ಸಮಸ್ಯೆಯಾಗಿದ್ದು ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯದ ಜನತೆ ಶಕ್ತರಾಗಿದ್ದಾರೆ.ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ನೇತೃತ್ವದಡಿ ಕಾಂಗ್ರೆಸ್ ಸರಕಾರ ಅಸ್ಸಾಂನಲ್ಲಿ ಹಿಂಸಾಚಾರದ ಯುಗಕ್ಕೆ ಅಂತ್ಯಹಾಡಿ ಶಾಂತಿಯ ಅಧ್ಯಾಯ ಆರಂಭಿಸಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಅಸ್ಸಾಂನ ವಿಭಜನೆ ಬಯಸುತ್ತಿದೆ. ಒಂದು ವೇಳೆ ಅಸ್ಸಾಂ ವಿಭಜನೆಯಾದರೆ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ರಾಜ್ಯದ ಜನತೆ ತೊಂದರೆಗೊಳಗಾಗುತ್ತಾರೆ ಎಂದು ರಾಹುಲ್ ಹೇಳಿದರು.

ದೇಶದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ದೇಶದ ಇಬ್ಬರು ಪ್ರಮುಖ ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ. ತಮಗೆ ನಿಕಟವಾಗಿರುವ ಉದ್ಯಮಿಗಳ ಹಿತಚಿಂತನೆಯೇ ಸರಕಾರದ ಧ್ಯೇಯವಾಗಿದೆ. ಕೊರೋನ ಸೋಂಕಿನ ಸಂದರ್ಭ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಮೋದಿ ಸರಕಾರ, ತನ್ನ ಇಬ್ಬರು ಉದ್ಯಮಿ ಸ್ನೇಹಿತರ ಬೃಹತ್ ಮೊತ್ತದ ಸಾಲವನ್ನು ಮನ್ನಾ ಮಾಡಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News