ನಮ್ಮ ಬೇಡಿಕೆ ಈಡೇರಿಸದೇ ಸರಕಾರವನ್ನು ಶಾಂತಿಯುತವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ: ರಾಕೇಶ್‌ ಟಿಕಾಯತ್

Update: 2021-02-14 17:39 GMT

ಕರ್ನಾಲ್: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದೇ ಸರಕಾರವನ್ನು ಶಾಂತಿಯುತವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಇಂದ್ರಿ ಧಾನ್ಯ ಮಾರುಕಟ್ಟೆಯಲ್ಲಿ ರೈತರ "ಮಹಾಪಂಚಾಯತ್" ಅನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ಮುಂದಾಗಿರುವ 40 ನಾಯಕರು ಇಡೀ ದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ‌ ಎಂದರು.

"ಸರ್ಕಾರವು ನಮ್ಮ ಪರವಾಗಿ ತೀರ್ಮಾನಿಸದವರೆಗೆ, ಸರಕಾರವು ಮಾತುಕತೆಗಳನ್ನು ನಡೆಸುತ್ತೇವೆಂದು ಕಮಿಟಿಗಳನ್ನು ರಚಿಸುತ್ತದೆ. ಆದರೆ ನಮ್ಮ ಮಾತುಗಳಿಗೆ ಕಿವಿಗೊಡುವುದಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ನಾವು ಅದನ್ನು ಶಾಂತಿಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ" ಎಂದು ವಿವಾದಿತ ಕಾಯ್ದೆಗಳನ್ನು ಹಿಂದೆಗೆಯುವಂತೆ ಅವರು ಉಲ್ಲೇಖಿಸಿದರು.

ಈ ಕಾನೂನುಗಳು ರೈತರ ಮೇಲೆ ಮಾತ್ರವಲ್ಲದೆ ಸಣ್ಣ ವ್ಯಾಪಾರಿಗಳು, ದೈನಂದಿನ ಉದ್ಯೋಗಿಗಳು ಮತ್ತು ಇತರ ವಿಭಾಗಗಳ ಮೇಲೂ ಪರಿಣಾಮ ಬೀರುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News