ಬಡ, ದುರ್ಬಲರಿಗೆ ಚಿಕಿತ್ಸೆ ನೀಡಲು ‘ಒಂದು ರೂಪಾಯಿ ಕ್ಲಿನಿಕ್’ ಪ್ರಾರಂಭಿಸಿದ ವೈದ್ಯ

Update: 2021-02-14 17:51 GMT

ಸಾಂಬಾಲ್ಪುರ, ಫೆ. 14: ಬಡವರು ಹಾಗೂ ದುರ್ಬಲರಿಗೆ ಚಿಕಿತ್ಸೆ ಒದಗಿಸಲು ಒಡಿಶಾ ಸಾಂಬಾಲ್ಪುರ ಜಿಲ್ಲೆಯಲ್ಲಿ ವೈದ್ಯರೊಬ್ಬರು ‘ಒಂದು ರೂಪಾಯಿ’ ಕ್ಲಿನಿಕ್ ಅನ್ನು ಆರಂಭಿಸಿದ್ದಾರೆ.

ಬುರ್ಲಾದ ವೀರ್ ಸುರೇಂದ್ರ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಆ್ಯಂಡ್ ರಿಸರ್ಚ್ (ವಿಐಎಂಎಸ್‌ಎಆರ್) ನ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಂಕರ್ ರಾಮ್‌ಚಂದಾನಿ ರೋಗಿಗಳಿಗಾಗಿ ಈ ಒಂದು ರೂಪಾಯಿ ಕ್ಲಿನಿಕ್ ಅನ್ನು ಬುರ್ಲಾ ಪಟ್ಟಣದಲ್ಲಿ ಆರಂಭಿಸಿದ್ದಾರೆ.

ಕರ್ತವ್ಯದ ವೇಳೆಯ ಬಳಿಕ ಬಡವರು ಹಾಗೂ ದುರ್ಬಲರಿಗೆ ಉಚಿತ ಚಿಕಿತ್ಸೆ ನೀಡುವ ತನ್ನ ದೀರ್ಘ ಕಾಲದ ಕನಸಿನ ಒಂದು ಭಾಗ ಈ ಒಂದು ರೂಪಾಯಿ ಶುಲ್ಕದ ಕ್ಲಿನಿಕ್ ಎಂದು ರಾಮ್‌ಚಂದಾನಿ ಹೇಳಿದ್ದಾರೆ.

‘‘ನಾನು ವಿಐಎಂಎಸ್‌ಎಆರ್‌ಗೆ ಹಿರಿಯ ನಿವಾಸಿ ವೈದ್ಯನಾಗಿ ಸೇರಿದೆ. ಅಲ್ಲದೆ, ಹಿರಿಯ ನಿವಾಸಿ ವೈದ್ಯರಿಗೆ ಖಾಸಗಿಯಾಗಿ ಚಿಕಿತ್ಸೆ ನೀಡಲು ಅವಕಾಶ ಇಲ್ಲ. ಆದುದರಿಂದ ನನಗೆ ಒಂದು ರೂಪಾಯಿ ಕ್ಲಿನಿಕ್ ಆರಂಭಿಸಲು ಸಾಧ್ಯವಾಗಲಿಲ್ಲ. ಆದರೆ, ನಾನು ಇತ್ತೀಚೆಗೆ ಸಹಾಯಕ ಪ್ರಾಧ್ಯಾಪಕನಾಗಿ ಭಡ್ತಿ ಹೊಂದಿದ್ದೇನೆ. ಈಗ ನನ್ನ ಕರ್ತವ್ಯದ ವೇಳೆಯ ಬಳಿಕ ಖಾಸಗಿ ಚಿಕಿತ್ಸೆ ನೀಡುವ ಅವಕಾಶ ಇದೆ. ಆದುದರಿಂದ ನಾನು ಬಾಡಿಗೆ ಮನೆಯೊಂದರಲ್ಲಿ ಈಗ ಕ್ಲಿನಿಕ್ ಆರಂಭಿಸಿದ್ದೇನೆ’’ ಎಂದು 38 ವರ್ಷದ ರಾಮ್‌ಚಂದಾನಿ ಹೇಳಿದ್ದಾರೆ.

ಬುರ್ಲಾ ಪಟ್ಟಣದ ಕಚ್ಚಾ ಮಾರುಕಟ್ಟೆ ಪ್ರದೇಶದಲ್ಲಿ ಈ ಕ್ಲಿನಿಕ್ ಆರಂಭಿಸಲಾಗಿದೆ. ಕ್ಲಿನಿಕ್ ಬೆಳಗ್ಗೆ 7 ಗಂಟೆಯಿಂದ 8 ಗಂಟೆ ವರೆಗೆ ಹಾಗೂ ಸಂಜೆ 6 ಗಂಟೆಯಿಂದ 7 ಗಂಟೆ ವರೆಗೆ ತೆರೆದಿರಲಿದೆ. ನಿರ್ಗತಿಕರು, ದುರ್ಬಲರು, ಬಡವರು, ವೃದ್ಧರು, ಅಂಗವಿಕಲರು ಹಾಗೂ ಸರಿಯಾದ ವೈದ್ಯಕೀಯ ಸೌಲಭ್ಯ ದೊರೆಯದವರಿಗೆ ಚಿಕಿತ್ಸೆ ನೀಡುವ ಉದ್ದೇಶವನ್ನು ಈ ಒಂದು ರೂಪಾಯಿ ಕ್ಲಿನಿಕ್ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ನಾನು ಸಮುದಾಯದ ವೈದ್ಯ. ಒಂದು ವರ್ಗದ ವೈದ್ಯನಲ್ಲ ಎಂದು ಅವರು ಶಂಕರ್ ರಾಮ್‌ಚಂದಾನಿ ಹೇಳಿದ್ದಾರೆ.

ಶಂಕರ್ ರಾಮ್‌ಚಂದಾನಿ ಅವರ ಪತ್ನಿ ಶಿಖಾ ರಾಮಚಂದಾನಿ ದಂತ ಶಸ್ತ್ರಚಿಕಿತ್ಸಾ ತಜ್ಞೆ. ಅವರು ಪತಿಯ ಸೇವೆಗೆ ನೆರವು ನೀಡುತ್ತಿದ್ದಾರೆ. ಕಳೆದ ಶುಕ್ರವಾರ ಈ ಕ್ಲಿನಿಕ್ ಆರಂಭವಾಗಿದೆ. ಮೊದಲ ದಿನವೇ ಕ್ಲಿನಿಕ್‌ಗೆ 33 ರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News