ಅಮಿತ್ ಶಾಗೆ ನೇಪಾಳ, ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರ ರಚಿಸುವ ಯೋಜನೆ ಇದೆ ಎಂದ ತ್ರಿಪುರಾ ಸಿಎಂ

Update: 2021-02-15 04:16 GMT

ಗುವಾಹತಿ: ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ ಇದೀಗ ಅಚ್ಚರಿಯ ಹೇಳಿಯೊಂದನ್ನು ನೀಡಿದ್ದು, ಬಿಜೆಪಿಯನ್ನು ದೇಶಾದ್ಯಂತ ವಿಸ್ತರಿಸುವುದು ಮಾತ್ರವಲ್ಲದೇ ನೆರೆಯ ದೇಶಗಳಿಗೂ ವಿಸ್ತರಿಸಲು ಪಕ್ಷ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದ್ದಾರೆ.

"ನೇಪಾಳ ಮತ್ತು ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರ ರಚಿಸುವ ಯೋಜನೆಯನ್ನು ಗೃಹ ಸಚಿವ ಅಮಿತ್ ಶಾ ಹೊಂದಿದ್ದಾರೆ" ಎಂದು ಅಗರ್ತಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಪ್ಲಬ್ ಹೇಳಿದ್ದಾರೆ. 2018ರ ವಿಧಾನಸಭಾ ಚುನಾವಣೆಯ ಯೋಜನೆಗಳ ಬಗ್ಗೆ ಚರ್ಚಿಸುವಾಗ ಅಮಿತ್ ಶಾ ಈ ಬಗ್ಗೆ ಚರ್ಚೆ ನಡೆಸಿದ್ದರು ಎಂದು ವಿವರಿಸಿದರು.

ಭಾರತದ ಎಲ್ಲ ರಾಜ್ಯಗಳನ್ನು ಗೆಲ್ಲುವ ಜತೆಗೆ ಸಾಗರೋತ್ತರ ವಿಸ್ತರಣೆಯ ಬಗ್ಗೆ ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಶಾ ಚರ್ಚಿಸಿದ್ದಾಗಿ ಬಿಪ್ಲಬ್ ದೇವ್ ಬಹಿರಂಗಪಡಿಸಿದ್ದಾರೆ.

'ರಾಜ್ಯ ಅತಿಥಿಗೃಹದಲ್ಲಿ ನಾವು ಚರ್ಚಿಸುತ್ತಿದ್ದಾಗ ಬಿಜೆಪಿ ಈಶಾನ್ಯ ವಲಯ ಕಾರ್ಯದರ್ಶಿ ಅಜಯ್ ಜಮ್‍ವಾಲ್ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದನ್ನು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾ, ಇನ್ನು ಶ್ರೀಲಂಕಾ, ನೇಪಾಳ ಬಾಕಿ ಇದೆ ಎಂದು ಹೇಳಿದರು. ನಮ್ಮ ಪಕ್ಷವನ್ನು ಶ್ರೀಲಂಕಾ, ನೇಪಾಳಕ್ಕೂ ವಿಸ್ತರಿಸಿ ಅಲ್ಲಿ ಸರ್ಕಾರ ರಚಿಸಬೇಕು ಎಂದು ಹೇಳಿದ್ದರು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ಬೆಳೆಸಿದ್ದು ಅಮಿತ್ ಶಾ ಅವರ ನಾಯಕತ್ವ' ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News