×
Ad

ಟೂಲ್ ಕಿಟ್ ಪ್ರಕರಣ: ವಕೀಲೆ,ಸಾಮಾಜಿಕ ಕಾರ್ಯಕರ್ತೆ ನಿಕಿತಾ ಜೇಕಬ್‌ ಗೆ ಜಾಮೀನು ರಹಿತ ಬಂಧನ ವಾರಂಟ್

Update: 2021-02-15 11:51 IST

ಹೊಸದಿಲ್ಲಿ, ಫೆ. 15: ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ರೈತರ ಪ್ರತಿಭಟನೆ ಕುರಿತ ‘ಟೂಲ್ ಕಿಟ್’ಗೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿಯನ್ನು ಬಂಧಿಸಿದ ಒಂದು ದಿನದ ಬಳಿಕ ದಿಲ್ಲಿ ಪೊಲೀಸರು ಸೋಮವಾರ ಇನ್ನಿಬ್ಬರು ಸಾಮಾಜಿಕ ಹೋರಾಟಗಾರರಿಗೆ ಜಾಮೀನು ರಹಿತ ಬಂಧನ ಆದೇಶ ಜಾರಿಗೊಳಿಸಿದ್ದಾರೆ.

‘‘ನಿಕಿತಾ ಜಾಕೋಬ್ ಹಾಗೂ ಶಂತನು ಅವರ ವಿರುದ್ಧ ನಾವು ಜಾಮೀನು ರಹಿತ ಬಂದನ ಆದೇಶ ಜಾರಿಗೊಳಿಸಿದ್ದೇವೆ. ಅವರಿಬ್ಬರು ಜಾಮೀನು ರಹಿತ ಆರೋಪ ಎದುರಿಸುತ್ತಿದ್ದಾರೆ. ಟೂಲ್‌ಕಿಟ್ ಪ್ರಕರಣದಲ್ಲಿ ಅವರು ಭಾಗಿಯಾಗಿರುವುದನ್ನು ವಿಶೇಷ ಸೆಲ್‌ನ ಸೈಬರ್ ಘಟಕ ಪತ್ತೆ ಮಾಡಿದೆ. ನಾವು ಅವರನ್ನು ಶೀಘ್ರದಲ್ಲಿ ಬಂಧಿಸಲಿದ್ದೇವೆ’’ ಎಂದು ದಿಲ್ಲಿ ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ದಿನ ನಡೆಯುವ ರೈತರ ಪ್ರತಿಭಟನೆಗೆ ಮುನ್ನ ‘ಟ್ವೀಟ್‌ಗಳ ಬಿರುಗಾಳಿ’ ಸೃಷ್ಟಿಸಲು ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್ ಹಿಂದಿರುವ ಸಂಘಟನೆ ಸಾಮಾಜಿಕ ಹೋರಾಟಗಾರ್ತಿ ನಿಕಿತಾ ಜಾಕೋಬ್ ಅವರನ್ನು ಸಂಪರ್ಕಿಸಿತ್ತು. ಈ ಸಂಘಟನೆ ಖಲಿಸ್ತಾನ್ ಗುಂಪು ಎಂದು ನಮ್ಮ ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯವಾದಿಯೂ ಆಗಿರುವ ನಿಕಿತಾ ಜಾಕೋಬ್ ನಾಲ್ಕು ವಾರಗಳ ಕಾಲ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲದೆ ಪೊಲೀಸರು ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಪ್ರಥಮ ಮಾಹಿತಿ ವರದಿಯ ಪ್ರತಿಯನ್ನು ಕೋರಿದ್ದಾರೆ.

ಮನವಿಯಲ್ಲಿ ನಿಕಿತ ಜಾಕೋಬ್ ತನ್ನ ಮನೆಗೆ ದಿಲ್ಲಿ ಪೊಲೀಸರು ಕಳೆದ ಗುರುವಾರ ಸರ್ಚ್ ವಾರಂಟ್‌ನೊಂದಿಗೆ ಆಗಮಿಸಿದ್ದರು ಹಾಗೂ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿ ದ್ದಾರೆ ಎಂದು ಆರೋಪಿಸಿದ್ದಾರೆ. ಟೂಲ್‌ಕಿಟ್ ದಾಖಲೆಗಳನ್ನು ತಿದ್ದಿದ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ನಿಕಿತಾ ಜಾಕೋಬ್ ಒಳಗಾಗಿದ್ದಾರೆ. ದಿಶಾ ರವಿ ಅವರು ಗ್ರೆಟಾ ಥನ್‌ಬರ್ಗ್ ಅವರ ‘ಫ್ರೈಡೇಸ್ ಫಾರ್ ಫ್ಯೂಚರ್’ ಅಭಿಯಾನದ ಭಾಗವಾಗಿದ್ದರು ಎಂದು ಹೇಳಲಾಗುತ್ತಿದೆ.

‘‘ನಾನು ಟೂಲ್‌ಕಿಟ್ ರಚಿಸಿಲ್ಲ. ರೈತರಿಗೆ ಬೆಂಬಲ ನೀಡಲು ಬಯಸಿದ್ದೆ. ಫೆಬ್ರವರಿ 3ರಂದು ಟೂಲ್‌ಕಿಟ್‌ನ ಎರಡು ಗೆರೆಗಳನ್ನು ತಿದ್ದಿದ್ದೇನೆ’’ ಎಂದು ವೌಂಟ್ ಕಾರ್ಮೆಲ್ ಕಾಲೇಜಿನ ಪದವೀಧರೆ ದಿಶಾ ರವಿ ನ್ಯಾಯಾಲಯಕ್ಕೆ ತಿಳಿಸಿದ್ದರು. ನ್ಯಾಯಾಲಯ ಅವರನ್ನು ಮುಂದಿನ ವಿಚಾರಣೆ ವರೆಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News