"ನಿಮ್ಮ ಕಂಪೆನಿ ಮೌಲ್ಯ ಟ್ರಿಲಿಯನ್‌ ಡಾಲರ್‌ ಆಗಿರಬಹುದು, ನಮಗೆ ನಮ್ಮ ನಾಗರಿಕರ ಖಾಸಗಿತನ ಮುಖ್ಯ"

Update: 2021-02-15 19:34 GMT

ಹೊಸದಿಲ್ಲಿ, ಫೆ.15: ಫೇಸ್‌ಬುಕ್ ಒಡೆತನದ ಸಾಮಾಜಿಕ ಜಾಲತಾಣ ವೇದಿಕೆ ವಾಟ್ಸಾಪ್‌ನ ಗೌಪ್ಯತಾ ನೀತಿ ಪರಿಷ್ಕರಿಸಿರುವ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರಕಾರ ಮತ್ತು ವಾಟ್ಸಾಪ್‌ಗೆ ನೋಟಿಸ್ ಜಾರಿಗೊಳಿಸಿದೆ.

ಯುರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ವಾಟ್ಸಾಪ್‌ನ ಗೌಪ್ಯತಾ ನೀತಿ ಕಳಪೆಯಾಗಿದೆ ಎಂದು ದೂರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಾಲ್ಕು ವಾರದೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರಕಾರ, ವಾಟ್ಸಾಪ್‌ಗೆ ನೋಟಿಸ್ ಜಾರಿಗೊಳಿಸಿದೆ.

ವಾಟ್ಸಾಪ್‌ನ ಹೊಸ ಗೌಪ್ಯತಾ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಉಲ್ಲೇಖಿಸಿದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠ, ಜನತೆ ತಮ್ಮ ಗೌಪ್ಯತೆಯ ಬಗ್ಗೆ ಆತಂಕಿತರಾಗಿದ್ದಾರೆ. ಗೌಪ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದೆ.

ಬಳಕೆದಾರರ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಆರೋಪವನ್ನು ನಿರಾಕರಿಸಿದ ವಾಟ್ಸಾಪ್, ವಿಶೇಷ ಮಾಹಿತಿ ಸಂರಕ್ಷಣೆ ಕಾನೂನು ಹೊಂದಿರುವ ಯುರೋಪ್ ರಾಷ್ಟ್ರಗಳನ್ನು ಹೊರತುಪಡಿಸಿ, ಉಳಿದೆಲ್ಲಾ ದೇಶಗಳಿಗೆ ಏಕರೂಪದ ಗೌಪ್ಯ ನೀತಿ ರೂಪಿಸಲಾಗಿದೆ. ಭಾರತವೂ ಯುರೋಪ್ ದೇಶಗಳಂತೆಯೇ ನಿಯಮ ರೂಪಿಸಿದರೆ ಭಾರತಕ್ಕೂ ಇದೇ ನಿಯಮ ಅನ್ವಯಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿತು.

ಇದಕ್ಕೆ ಉತ್ತರಿಸಿದ ನ್ಯಾಯಾಲಯ ‘ ಹಣಕ್ಕಿಂತಲೂ ಪ್ರಜೆಗಳ ಗೌಪ್ಯತೆ ತುಂಬಾ ಮುಖ್ಯವಾಗಿದೆ. ಕಂಪೆನಿಯ (ವಾಟ್ಸಾಪ್) ಬಳಿ ಕೋಟ್ಯಾಂತರ ರೂಪಾಯಿ ಹಣವಿರಬಹುದು. ಆದರೆ ಜನತೆ ತಮ್ಮ ಗೌಪ್ಯತೆಯನ್ನು ಕಂಪೆನಿಯ ವೌಲ್ಯಕ್ಕಿಂತ ಹೆಚ್ಚು ಗೌರವಿಸುತ್ತಾರೆ’ ಎಂದು ಹೇಳಿತು ಹಾಗೂ ಕೇಂದ್ರ ಸರಕಾರ ಮತ್ತು ವಾಟ್ಸಾಪ್‌ಗೆ ನೋಟಿಸ್ ಜಾರಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News