ದೇಶಕ್ಕೆ ಅಪಖ್ಯಾತಿ ತರುವ ಉದ್ದೇಶದಿಂದ ಬಂಧಿತರು ಟೂಲ್‌ ಕಿಟ್‌ ಸಿದ್ಧಪಡಿಸಿದ್ದರು: ದಿಲ್ಲಿ ಪೊಲೀಸ್‌ ಹೇಳಿಕೆ

Update: 2021-02-15 12:36 GMT

ಹೊಸದಿಲ್ಲಿ: ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಶೇರ್ ಮಾಡಿದ್ದ ರೈತರ ಪ್ರತಿಭಟನೆ ಕುರಿತಾದ ಟೂಲ್ ಕಿಟ್ ಅನ್ನು ನಿಕಿತಾ ಜೇಕಬ್, ಶಂತನು ಹಾಗೂ ರವಿವಾರ ದಿಲ್ಲಿ ಪೊಲೀಸರಿಂದ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ದಿಶಾ ರವಿ ಸಿದ್ಧಪಡಿಸಿದ್ದರು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ಭಾರತದ ಹೆಸರನ್ನು ಹಾಳು ಮಾಡುವ ಉದ್ದೇಶ ಇವರದ್ದಾಗಿತ್ತು ಎಂದು ಇಂದು ಪತ್ರಿಕಾಗೋಷ್ಠಿ ನಡೆಸಿದ ಜಂಟಿ ಪೊಲೀಸ್ ಆಯುಕ್ತ (ಸೈಬರ್ ಸೆಲ್) ಪ್ರೇಮ್ ನಾಥ್ ಹೇಳಿದರು.

ಫೆಬ್ರವರಿ 11ರಂದು ಪೊಲೀಸರು ನಿಕಿತಾ ಮನೆಗೆ ದಾಳಿ ನಡೆಸಿದ್ದರು, ಮರುದಿನವೇ ಆಕೆ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು. ಕೆನಡಾದಲ್ಲಿ ವಾಸಿಸುವ ಪುನೀತ್ ಎಂಬ ಮಹಿಳೆ ಈ ಜನರನ್ನು ಖಲಿಸ್ತಾನಿ ಪರ ಸಂಘಟನೆ ಪೋಯೆಟಿಕ್ ಜಸ್ಟಿಸ್ ಫೌಂಡೇಶನ್‍ಗೆ ಪರಿಚಯಿಸಿತ್ತು. ಜನವರಿ 11ರಂದು ನಿಕಿತಾ ಮತ್ತು ಶಂತನು  ಫೌಂಡೇಶನ್ ಆಯೋಜಿಸಿದ್ದ ಝೂಮ್ ಸಭೆಯಲ್ಲಿ ಭಾಗವಹಿಸಿ  ಚರ್ಚೆ ನಡೆಸಿದ್ದರು ಎಂದೂ ಪ್ರೇಮ್ ನಾಥ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ದಿಶಾ ರವಿ  ಬಂಧನದ ಬೆನ್ನಲ್ಲೇ ಪೊಲೀಸರು ನಿಕಿತಾ ಮತ್ತು ಶಂತನು ವಿರುದ್ಧ ಟೂಲ್ ಕಿಟ್ ಪ್ರಕರಣದಲ್ಲಿ ಜಾಮೀನುರಹಿತ ವಾರಂಟ್ ಜಾರಿಗೊಳಿಸಿದ್ದಾರೆ. ವಕೀಲೆಯಾಗಿರುವ ಜೇಕಬ್ ನಾಲ್ಕು ವಾರಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ವಿರುದ್ಧದ ಎಫ್‍ಐಆರ್ ಪ್ರತಿಯನ್ನೂ ಆಕೆ ಕೇಳಿದ್ದಾರಲ್ಲದೆ ಯಾವುದೇ ಬಲವಂತದ ಪೊಲೀಸ್ ಕ್ರಮದಿಂದ ತಮಗೆ ಮಧ್ಯಂತರ ರಕ್ಷಣೆಯೊದಗಿಸುವಂಎಯೂ ಮನವಿ ಮಾಡಿದ್ದಾರೆ.

ಈ ಪ್ರಕರಣ ನಾಳೆ ವಿಚಾರಣೆಗೆ ಬರಲಿದೆ. ತಮ್ಮ ಚಿತ್ರಗಳು ಹಾಗೂ ಇತರ ವೈಯಕ್ತಿಕ ಮಾಹಿತಿಗಳನ್ನು ಕೆಲ ಟ್ರೋಲ್‍ಗಳು ಹಾಗೂ ಬಾಟ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುವಂತೆ ಮಾಡಿವೆ ಎಂದೂ ಆಕೆ ತಮ್ಮ ಅಪೀಲಿನಲ್ಲಿ ಹೇಳಿದ್ದಾರಲ್ಲದೆ ಟೂಲ್ ಕಿಟ್ ವಿಚಾರದಲ್ಲಿ ಯಾವುದೇ ಧಾರ್ಮಿಕ, ರಾಜಕೀಯ ಅಥವಾ ಆರ್ಥಿಕ ಉದ್ದೇಶ ಅಥವಾ ಅಜೆಂಡಾ ಇಲ್ಲ ಎಂದು ಅಪೀಲಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News