ಉದ್ಯಮಿ ಬಿ.ಆರ್.ಶೆಟ್ಟಿ,ಎನ್‌ಎಂಸಿಯ ಮಾಜಿ ಅಧಿಕಾರಿಗಳ ಆಸ್ತಿಗಳ ಸ್ತಂಭನಕ್ಕೆ ಬ್ರಿಟನ್ ಬ್ಯಾಂಕಿನ ಆದೇಶ

Update: 2021-02-15 16:32 GMT

ದುಬೈ,ಫೆ.15: ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ (ಎಡಿಸಿಬಿ)ನ ಕೋರಿಕೆಯ ಮೇರೆಗೆ ಬ್ರಿಟನ್‌ನ ನ್ಯಾಯಾಲಯವೊಂದು ಕನ್ನಡಿಗ ಉದ್ಯಮಿ ಹಾಗೂ ಎನ್‌ಎಂಸಿ ಹೆಲ್ತ್‌ನ ಸ್ಥಾಪಕ ಬಿ.ಆರ್.ಶೆಟ್ಟಿ,ಮಾಜಿ ಸಿಇಒ ಪ್ರಶಾಂತ ಮಂಗತ್ ಮತ್ತು ಇತರ ಇಬ್ಬರು ಮಾಜಿ ಹಿರಿಯ ಅಧಿಕಾರಿಗಳು ವಿಶ್ವಾದ್ಯಂತ ಹೊಂದಿರುವ ಆಸ್ತಿಗಳನ್ನು ಸ್ತಂಭನಗೊಳಿಸುವಂತೆ ಆದೇಶಿಸಿದೆ.

ಅಬುಧಾಬಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಎನ್‌ಎಂಸಿಯಲ್ಲಿನ ಅಕ್ರಮ ಹಣಕಾಸು ಅವ್ಯವಹಾರಗಳು ಕಳೆದ ವರ್ಷ ಬೆಳಕಿಗೆ ಬಂದ ನಂತರ ಕಂಪನಿಯು ಪತನಗೊಂಡಿತ್ತು ಮತ್ತು ನ್ಯಾಯಾಲಯದ ಆದೇಶದಂತೆ ಪರ್ಯಾಯ ವ್ಯವಸ್ಥೆಯು ಅದರ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಎನ್‌ಎಂಸಿಗೆ ಒಂದು ಶತಕೋಟಿ ಡಾಲರ್‌ಗೂ ಹೆಚ್ಚು ಸಾಲವನ್ನು ನೀಡಿದ್ದ ಎಡಿಸಿಬಿ ಮಾತುಕತೆಗಳ ಮತ್ತು ಕಂಪನಿಯ ಹಿಂದಿನ ಆಡಳಿತದ ವಿರುದ್ಧ ಕಾನೂನು ಪ್ರಕರಣಗಳ ನೇತೃತ್ವವನ್ನು ವಹಿಸಿದೆ. ಇತರ ಹಲವಾರು ಸ್ಥಳೀಯ ಮತ್ತು ವಿದೇಶಿ ಬ್ಯಾಂಕುಗಳಿಂದಲೂ ಸಾಲಗಳನ್ನು ಪಡೆದ್ದಿದ ಎನ್‌ಎಂಸಿ 400 ಕೋಟಿ ಡಾಲರ್ ಸಾಲಗಳನ್ನು ಪಾವತಿಸದೆ ಬಾಕಿಯುಳಿಸಿಕೊಂಡಿದೆ ಎನ್ನಲಾಗಿದೆ.

ಎಡಿಸಿಬಿಯ ಕೋರಿಕೆಯ ಮೇರೆಗೆ ಎನ್‌ಎಂಸಿಯ ಮಾಜಿ ಹಿರಿಯ ಅಧಿಕಾರಿಗಳ ಆಸ್ತಿಗಳು ಪರಭಾರೆಯಾಗುವ ಅಪಾಯವನ್ನು ತಡೆಯಲು ಉಚ್ಚ ನ್ಯಾಯಾಲಯವೊಂದು ಅವುಗಳ ಸ್ತಂಭನಕ್ಕೆ ಆದೇಶಿಸಿದೆ ಎಂದು ಲಂಡನ್ನಿನ ಮಾಧ್ಯಮಗಳು ವರದಿ ಮಾಡಿವೆ.

ಮಾಜಿ ಆಡಳಿತಾಧಿಕಾರಿಗಳು ವಂಚನೆಯನ್ನು ಎಸಗಿದ್ದಾರೆ ಎಂದು ಎನ್‌ಎಂಸಿಯ ಹಾಲಿ ಸಿಇಒ ಮೈಕೆಲ್ ಡೇವಿಸ್ ಅವರು ನೀಡಿರುವ ಲಿಖಿತ ಹೇಳಿಕೆಯನ್ನು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News