×
Ad

ಪುಲ್ವಾಮಾ ದಾಳಿಯ ಬಗ್ಗೆ ಮೊದಲೇ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಲಭಿಸಿತ್ತು: ತನಿಖಾ ವರದಿ

Update: 2021-02-16 18:34 IST

ಹೊಸದಿಲ್ಲಿ, ಫೆ.16: ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಭದ್ರತಾ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಮುಂಚಿತವಾಗಿಯೇ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯನ್ನು ಅಧಿಕಾರಿಗಳಿಗೆ ರವಾನಿಸಲಾಗಿತ್ತು. ಆದರೆ ಅವರು ಸಕಾಲಿಕ ಕ್ರಮ ಕೈಗೊಳ್ಳಲು ವಿಫಲವಾದ್ದರಿಂದ ಭಯೋತ್ಪಾದಕರು ತಮ್ಮ ಯೋಜನೆಯಲ್ಲಿ ಯಶಸ್ವಿಯಾದರು ಎಂದು ‘ದಿ ಫ್ರಂಟ್‌ಲೈನ್’ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಈ ದಾಳಿಯಲ್ಲಿ 44 ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದರು. ಇದರಲ್ಲಿ ಎರಡು 'ಕ್ರಮಯೋಗ್ಯ ಮಾಹಿತಿ'ಯಾಗಿದ್ದವು. ಭಯೋತ್ಪಾದಕರು ಇರುವ ಸ್ಥಳ, ಅವರ ಗುರುತಿನ ಕುರಿತ ಗುಪ್ತಚರ ಮಾಹಿತಿಯನ್ನು ಕ್ರಮಯೋಗ್ಯ ಮಾಹಿತಿ ಎನ್ನಲಾಗುತ್ತದೆ. ಕನಿಷ್ಟ ಪಕ್ಷ ಈ ಎರಡು ಕ್ರಮಯೋಗ್ಯ ಮಾಹಿತಿಯ ಬಗ್ಗೆಯಾದರೂ ಅಧಿಕಾರಿಗಳು ಸಕಾಲಿಕ ಕ್ರಮ ಕೈಗೊಂಡಿದ್ದರೆ ದಾಳಿಯನ್ನು ತಡೆಯಬಹುದಾಗಿತ್ತು ಎಂದು ಮೂಲಗಳು ಹೇಳಿವೆ ಎಂದು ‘ದಿ ಫ್ರಂಟ್‌ಲೈನ್’ ವರದಿ ಮಾಡಿದೆ.

ದಾಳಿಗೂ ಮುನ್ನ ಲಭಿಸಿದ ಗುಪ್ತಚರ ವರದಿಗಳಿವು:

2019ರ ಜನವರಿ 2: ರಾಜ್‌ಪೋರಾದಲ್ಲಿ ತನ್ನ ನಾಲ್ವರು ಸದಸ್ಯರ ಹತ್ಯೆಗೆ ಸೇಡು ತೀರಿಸಲು ಜೈಶೆ ಮುಹಮ್ಮದ್(ಜೆಇಎಂ) ಸಂಘಟನೆ ದಕ್ಷಿಣ ಕಾಶ್ಮೀರದಲ್ಲಿ ಯೋಜನೆಯನ್ನು ರೂಪಿಸಿದೆ ಎಂದು 2019ರ ಜನವರಿ 2ರಂದು ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಇದನ್ನು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾಶ್ಮೀರ ಪೊಲೀಸ್ ಐಜಿಪಿಯವರಿಗೂ ರವಾನಿಸಲಾಗಿತ್ತು.

2019ರ ಜನವರಿ 3: 2018ರಲ್ಲಿ ನಿವಾ ಪುಲ್ವಾಮದಲ್ಲಿ ಸಿಆರ್‌ಪಿಎಫ್ 183ನೇ ಬಟಾಲಿಯನ್ ಶಿಬಿರದ ಮೇಲೆ ನಡೆದ ದಾಳಿಯ ರೀತಿಯಲ್ಲೇ ಮತ್ತೊಂದು ದಾಳಿಗೆ ಸಂಚು ನಡೆಯುತ್ತಿದೆ ಎಂದು ವಿವರವಾದ ಮಾಹಿತಿ ರವಾನಿಸಲಾಗಿತ್ತು ಎಂದು ಗುಪ್ತಚರ ಮಾಹಿತಿಯನ್ನು ‘ದಿ ಫ್ರಂಟ್‌ಲೈನ್’ ಉಲ್ಲೇಖಿಸಿದೆ.

2019ರ ಜನವರಿ 7: ಶೋಫಿಯಾನ್ ಜಿಲ್ಲೆಯಲ್ಲಿ ಸಕ್ರಿಯವಾಗಿರುವ 3 ವ್ಯಕ್ತಿಗಳು(ಇವರಲ್ಲಿ ಒಬ್ಬ ವಿದೇಶೀಯ ಎಂದು ಹೇಳಲಾಗುತ್ತಿದೆ) ದಕ್ಷಿಣ ಕಾಶ್ಮೀರದಲ್ಲಿ ಐಇಡಿ(ಸುಧಾರಿತ ಸ್ಫೋಟಕ ಸಾಧನ) ತಯಾರಿ ಮತ್ತು ಸ್ಫೋಟದ ಬಗ್ಗೆ ಸ್ಥಳೀಯ ಯುವಕರಿಗೆ ತರಬೇತಿ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಭದ್ರತಾ ಪಡೆಯನ್ನು ಗುರಿಯಾಗಿಸಿ ಸ್ಫೋಟಕ ಮತ್ತು ಗ್ರೆನೇಡ್ ಎಸೆಯಲು ಇವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು ಎಂದು ಗುಪ್ತಚರ ಮಾಹಿತಿಯನ್ನು ‘ದಿ ಫ್ರಂಟ್‌ಲೈನ್’ ಉಲ್ಲೇಖಿಸಿದೆ.

2019ರ ಜನವರಿ 18: ಪುಲ್ವಾಮದ ಆವಂತಿಪೊರ ಪ್ರದೇಶದಲ್ಲಿ ಸ್ಥಳೀಯ ಯುವಕರ ಗುಂಪೊಂದು ವಿದೇಶೀ ವ್ಯಕ್ತಿಗಳ ನೆರವಿನಿಂದ ‘ಗೊಂದಲ ಮತ್ತು ಕೋಲಾಹಲ ಹುಟ್ಟಿಸುವ ಚಟುವಟಿಕೆ’ ನಡೆಸಲು ಯೋಜನೆ ರೂಪಿಸಿದೆ ಎಂದು ಮಾಹಿತಿ ನೀಡಲಾಗಿತ್ತು ಎಂದು ‘ದಿ ಫ್ರಂಟ್‌ಲೈನ್’ ವರದಿ ಉಲ್ಲೇಖಿಸಿದೆ.

2019ರ ಜನವರಿ 21: ಮಸೂದ್ ಅಝರ್‌ನ ಸೋದರಳಿಯ ತಲ್ಹಾ ರಶೀದ್‌ನ ಹತ್ಯೆಗೆ ಪ್ರತೀಕಾರ ತೀರಿಸಲು ಜೆಇಎಂ ಯೋಜನೆ ರೂಪಿಸಿದೆ ಎಂದು ‘ದಪ್ಪ ಅಕ್ಷರ’ದಲ್ಲಿ ಬರೆದು ವಿಶೇಷ ಮಾಹಿತಿ ನೀಡಲಾಗಿತ್ತು.

2019ರ ಜನವರಿ 24: ಮುದಸಿರ್ ಖಾನ್ ನೇತೃತ್ವದ ಜೆಇಎಂ ಘಟಕ 'ಮಹಾಪಾತಕ ಕೃತ್ಯದ' ಯೋಜನೆ ರೂಪಿಸುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು (ಪುಲ್ವಾಮಾ ದಾಳಿಯ ಕಿಂಗ್‌ಪಿನ್(ರೂವಾರಿ) ಮುದಸಿರ್ ಖಾನ್ ಎಂಬುದು ಬಳಿಕ ಬೆಳಕಿಗೆ ಬಂದಿದೆ.) ಎಂದು ಗುಪ್ತಚರ ವರದಿಯನ್ನು ‘ದಿ ಫ್ರಂಟ್‌ಲೈನ್’ ಉಲ್ಲೇಖಿಸಿದೆ.

2019ರ ಜನವರಿ 25: ಮುದಸಿರ್ ಖಾನ್ ಅಡಗುದಾಣದ ಬಗ್ಗೆ ದಪ್ಪ ಅಕ್ಷರದಲ್ಲಿ ಮಾಹಿತಿ ನೀಡಲಾಗಿತ್ತು. ಖಾನ್ ನಾಲ್ವರು ವಿದೇಶಿ ಬಾಡಿಗೆ ಬಂಟರೊಂದಿಗೆ ಮಿದೂರ ಮತ್ತು ಲಾಮ್‌ತ್ರಾಲ್ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಕೃತ್ಯ ರೂಪಿಸಲು ಈತ ಯೋಜನೆ ರೂಪಿಸಿರುವ ಸಾಧ್ಯತೆಯಿದೆ ಮತ್ತು ಇದಕ್ಕೆ 'ಆವಂತಿಪೊರ ಅಥವಾ ಪಾಂಪೋರ್ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರಬಹುದು' ಎಂದು ಮಾಹಿತಿಯಲ್ಲಿ ತಿಳಿಸಲಾಗಿತ್ತು. ಇದು ಮಹತ್ವದ ಕ್ರಮಯೋಗ್ಯ ಮಾಹಿತಿಯಾಗಿತ್ತು ಎಂದು ‘ದಿ ಫ್ರಂಟ್‌ಲೈನ್’ ವರದಿ ತಿಳಿಸಿದೆ.

2019ರ ಫೆಬ್ರವರಿ 9: "ಅಫ್ಝಲ್ ಗುರುವನ್ನು ನೇಣಿಗೇರಿಸಿದ್ದಕ್ಕೆ ಪ್ರತೀಕಾರವಾಗಿ" ಜೆಇಎಂ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಲಾಗಿತ್ತು ಮತ್ತು ಇದನ್ನು ಜಮ್ಮು ಕಾಶ್ಮೀರದ ಎಡಿಜಿ, ಸಿಆರ್‌ಪಿಎಫ್‌ಗೂ ರವಾನಿಸಲಾಗಿತ್ತು.

2019ರ ಫೆಬ್ರವರಿ 12: ಟ್ವಿಟರ್ ಹ್ಯಾಂಡಲ್ ಕುರಿತಾದ ಈ ಮಾಹಿತಿ "ಅತ್ಯಂತ ರಹಸ್ಯ ಮತ್ತು ತುರ್ತು ವಿಷಯವನ್ನೊಳಗೊಂಡಿದೆ" ಎಂದು ತಿಳಿಸಲಾಗಿತ್ತು. ‘ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸಂಚರಿಸುವ ಮಾರ್ಗದಲ್ಲಿ ಐಇಡಿ(ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸುವ ಬಗ್ಗೆ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊ ಪ್ರಾತ್ಯಕ್ಷಿಕೆ ಸಹಿತ ವಿವರಿಸಲಾಗಿದೆ’ ಎಂದು ಟ್ವಿಟರ್ ಹ್ಯಾಂಡಲ್‌ನ ವಿವರ ಸಹಿತ ಮಾಹಿತಿ ನೀಡಲಾಗಿತ್ತು.

2019ರ ಫೆಬ್ರವರಿ 13: ದಾಳಿಯ ಮುಂಚಿನ ದಿನ ಅಂತಿಮ ಎಚ್ಚರಿಕೆ ನೀಡಲಾಗಿತ್ತು. ‘ಜಮ್ಮು-ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಸಂಚರಿಸುವ ಮಾರ್ಗದಲ್ಲಿ ಐಇಡಿ ಸ್ಫೋಟದ ಸಾಧ್ಯತೆ’ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.

ಮುದಸಿರ್ ಖಾನ್ ಹಾಗೂ ಮತ್ತೊಬ್ಬ ವ್ಯಕ್ತಿ ಬೃಹತ್ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ ಎಂದು ಪುಲ್ವಾಮಾದ ನಮ್ಮ ಸ್ಥಳೀಯ ಮಾಹಿತಿದಾರರು (ಮುದಸಿರ್ ಖಾನ್ ಮತ್ತು ಶಾಹಿದ್ ಬಾಬಗೆ ನಿಕಟವಾಗಿದ್ದವರು) ಜನವರಿ 22ರಂದು ಮಾಹಿತಿ ನೀಡಿದ್ದರು. ಆದರೆ ಗುಪ್ತಚರ ಮಾಹಿತಿಯ ಬಗ್ಗೆ ಸಕಾಲಿಕ ಕ್ರಮ ಕೈಗೊಳ್ಳುವ ಬದಲು, ದಾಳಿಯ ಮುನ್ನಾದಿನ(ಫೆ.13) ಆವಂತಿಪೊರದ ಪೊಲೀಸ್ ಅಧೀಕ್ಷಕ ಮುಹಮ್ಮದ್ ಝೈದ್‌ರನ್ನು ವರ್ಗಾಯಿಸಲಾಗಿತ್ತು. ಉಗ್ರರ ಬೆದರಿಕೆ ಹೆಚ್ಚಿದ್ದ ಸಂದರ್ಭದಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿರುವುದು ಸೂಕ್ತ ಕ್ರಮವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿರುವುದಾಗಿ ‘ದಿ ಫ್ರಂಟ್‌ಲೈನ್’ನ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News