ಕಾನೂನಿನ ಮುಂದೆ 22, 50 ವರ್ಷದ ವ್ಯಕ್ತಿ ಸಮಾನ: ದಿಲ್ಲಿ ಪೊಲೀಸ್

Update: 2021-02-16 16:37 GMT

ಹೊಸದಿಲ್ಲಿ, ಫೆ. 16: ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಅವರನ್ನು ಕಾನೂನಿಗೆ ಅನುಗುಣವಾಗಿ ಬಂಧಿಸಲಾಗಿದೆ. ಕಾನೂನು 22 ವರ್ಷದವರು ಹಾಗೂ 50 ವರ್ಷದವರ ನಡುವೆ ವ್ಯತ್ಯಾಸ ಕಾಣುವುದಿಲ್ಲ ಎಂದು ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್ ಶ್ರೀವಾತ್ಸವ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀವಾತ್ಸವ, 22 ವರ್ಷದ ದಿಶಾ ರವಿ ಅವರನ್ನು ಬಂಧಿಸಿರುವುದು ತಪ್ಪು ಎಂದು ಜನರು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದಿಶಾ ರವಿ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ದಿಶಾ ರವಿ ಅವರು ಟೆಲಿಗ್ರಾಮ್ ಆ್ಯಪ್ ಮೂಲಕ ಟೂಲ್‌ಕಿಟ್ ಅನ್ನು ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ಗೆ ಕಳುಹಿಸಿಕೊಟ್ಟಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ನಡುವೆ, ಸಾಮಾಜಿಕ ಹೋರಾಟಗಾರರಾದ ದಿಶಾ ರವಿ, ನಿಕಿತಾ ಜೇಕಬ್ ಹಾಗೂ ಶಂತನು ಅವರು ಭಾಗವಹಿಸಿದ್ದಾರೆ ಎನ್ನಲಾದ ಜನವರಿ 11ರಂದು ನಡೆದ ವಚುರ್ವಲ್ ಸಭೆಯ ವಿವರ ನೀಡುವಂತೆ ಕೋರಿ ದಿಲ್ಲಿ ಪೊಲೀಸರು ವೀಡಿಯೊ ಸಂವಹನ ಆ್ಯಪ್ ಝೂಮ್‌ಗೆ ಪತ್ರ ಬರೆದಿದ್ದಾರೆ. ಗಣರಾಜ್ಯೋತ್ಸವದಂದು ಹಿಂಸಾಚಾರ ನಡೆದ ಕೆಲವು ದಿನಗಳ ಹಿಂದೆ ಝೂಮ್ ಆ್ಯಪ್‌ನಲ್ಲಿ ನಡೆದ ಸಭೆಯಲ್ಲಿ ಮುಂಬೈ ವಕೀಲರಾದ ನಿಕಿತಾ ಜೇಕಬ್, ಪುಣೆಯ ಎಂಜಿನಿಯರ್ ಶಂತನು, ದಿಶಾ ರವಿ ಸೇರಿದಂತೆ 70ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿಕಿತಾ ಜೇಕಬ್ ಹಾಗೂ ಶಂತನು ವಿರುದ್ಧ ದಿಲ್ಲಿ ಪೊಲೀಸರು ಬಂಧನಾದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News