ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಚಿಂತನೆ: ಸುಪ್ರೀಂಕೋರ್ಟ್‌ಗೆ ಕೇಂದ್ರದ ಮಾಹಿತಿ

Update: 2021-02-16 15:48 GMT

ಹೊಸದಿಲ್ಲಿ, ಫೆ.16: ನೆಟ್‌ಫ್ಲಿಕ್ಸ್, ಅಮಝಾನ್ ಪ್ರೈಂ ಮತ್ತಿತರ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ವಿಷಯಗಳನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ಸರಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಒಟಿಟಿ(ಓವರ್ ದಿ ಟಾಪ್) ವೇದಿಕೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ 6 ವಾರದೊಳಗೆ ಪ್ರತಿಕ್ರಿಯಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಸೂಚಿಸಿದಾಗ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರಕಾರದ ವಕೀಲರು ಉತ್ತರಿಸಿದರು. ಕೇವಲ ಚಿಂತನೆ ಮಾತ್ರ ಸ್ವೀಕಾರಾರ್ಹವಲ್ಲ. ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳಲು ಯೋಜಿಸಿದೆ ಎಂಬ ಬಗ್ಗೆ ವಿವರ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿತು. ಒಟಿಟಿ ವೇದಿಕೆಗಳು ಹೆಚ್ಚುತ್ತಿರುವುದು ಮತ್ತು ದೇಶದಲ್ಲಿ ಸೈಬರ್ ಅಪರಾಧ ಪ್ರಕರಣ ಹೆಚ್ಚುತ್ತಿರುವ ಮಧ್ಯೆ ನೇರ ಸಂಬಂಧವಿದೆ.

ಆದ್ದರಿಂದ ಈ ವೇದಿಕೆಗಳ ಮೂಲಕ ಪ್ರಸಾರವಾಗುವ ವಿಷಯಗಳ ಬಗ್ಗೆ ನಿಗಾ ಇರಿಸಲು ಸೂಕ್ತ ಮಂಡಳಿ, ಇಲಾಖೆ ಅಥವಾ ಸಂಸ್ಥೆಗಳನ್ನು ರಚಿಸಬೇಕು. ನೆಟ್‌ಫ್ಲಿಕ್ಸ್, ಅಮಝಾನ್ ಪ್ರೈಮ್, ಝೀ 5, ಹಾಟ್‌ಸ್ಟಾರ್ ಸಹಿತ ಯಾವುದೇ ಒಟಿಟಿ ವೇದಿಕೆಗಳು ಫೆಬ್ರವರಿ 2020ರಿಂದ ಜಾರಿಗೆ ತಂದಿರುವ ಸ್ವಯಂ ನಿಯಂತ್ರಣ ನಿಯಮಕ್ಕೆ ಸಹಿ ಹಾಕಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News