ಭಾರತ ವಿರೋಧಿ ಶಕ್ತಿಗಳು ಅಸ್ಥಿರತೆ ಹರಡಲು ಬಯಸುತ್ತಿವೆ: ಕೇಂದ್ರದ ಸಹಾಯಕ ಸಚಿವ ಕೃಷ್ಣ ರೆಡ್ಡಿ

Update: 2021-02-16 18:10 GMT

ಶ್ರೀನಗರ, ಫೆ. 16: ‘ಭಾರತ ವಿರೋಧಿ ಶಕ್ತಿ’ಗಳು ದೇಶದಲ್ಲಿ ಅಸ್ಥಿರತೆ ಹರಡಲು ಪ್ರಯತ್ನಿಸುತ್ತಿವೆ. ದಿಲ್ಲಿ ಅವರ ಪ್ರಾಥಮಿಕ ಗುರಿ ಎಂದು ಕೇಂದ್ರದ ಗೃಹ ಖಾತೆಯ ಸಹಾಯಕ ಸಚಿವ ಜಿ. ಕೃಷ್ಣ ರೆಡ್ಡಿ ಮಂಗಳವಾರ ಪ್ರತಿಪಾದಿಸಿದ್ದಾರೆ. ದಿಲ್ಲಿ ಪೊಲೀಸ್‌ನ 74ನೇ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘‘ಅಸ್ಥಿರತೆ ಹರಡಲು ಬಯಸುವ ಹಲವು ಭಾರತ ವಿರೋಧಿ ಶಕ್ತಿಗಳು ಇಲ್ಲಿವೆ. ದಿಲ್ಲಿ ಅವರ ಗುರಿ’’ ಎಂದರು. ಈ ಯೋಜನೆಯ ಭಾಗವಾಗಿ 2020 ಫೆಬ್ರವರಿಯಲ್ಲಿ ಗಲಭೆ ಹಾಗೂ ಕಾನೂನು ಬಾಹಿರ ಪ್ರತಿಭಟನೆಗಳು ನಡೆದವು ಎಂದು ಅವರು ಹೇಳಿದರು.

ನೂತನ ಕೃಷಿ ಕಾಯ್ದೆಗಳ ವಿರುದ್ಧ ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭ ರೈತರು ದಿಲ್ಲಿ ಪ್ರವೇಶಿಸಿದ ಬಳಿಕ ಸಂಭವಿಸಿದ ಹಿಂಸಾಚಾರವನ್ನು ನಿಯಂತ್ರಿಸಿದ ಪೊಲೀಸರ ಕ್ರಮವನ್ನು ಅವರು ಪ್ರಶಂಸಿಸಿದರು. ‘‘ಜನವರಿ 26ರಂದು ಭಾರತ ವಿರೋಧಿ ಶಕ್ತಿಗಳು ದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಲು ರೈತರ ಪ್ರತಿಭಟನೆಯನ್ನು ಹೇಗೆ ಬಳಸಿಕೊಂಡಿತು ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಅವರ ರಾಷ್ಟ್ರ ವಿರೋಧಿ ಚಟುವಟಿಕೆ ಹಾಗೂ ಪ್ರಚೋದನಾಕಾರಿ ನಡತೆಯ ಹೊರತಾಗಿಯೂ ದಿಲ್ಲಿ ಪೊಲೀಸರು ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ’’ ಎಂದು ಕೃಷ್ಣ ರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News