×
Ad

ಟೂಲ್‌ಕಿಟ್ ಟ್ವೀಟ್ ಮಾಡಬೇಡ, ನಮ್ಮ ಹೆಸರಿದೆ: ಗ್ರೆಟಾ ಥನ್‌ಬರ್ಗ್‌ಗೆ ದಿಶಾ ಸಂದೇಶ ; ಅಧಿಕಾರಿಗಳು

Update: 2021-02-16 23:50 IST

ಹೊಸದಿಲ್ಲಿ, ಫೆ.16: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಯಾವ ರೀತಿ ಬೆಂಬಲ ವರ್ಧಿಸಬಹುದು ಎಂಬ ಮಾಹಿತಿ ಒಳಗೊಂಡಿದೆ ಎನ್ನಲಾದ ಟೂಲ್‌ಕಿಟ್ ಅನ್ನು ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ, ಸಹ ಕಾರ್ಯಕರ್ತೆ ದಿಶಾ ರವಿ ‘ಟೂಲ್‌ಕಿಟ್ ಟ್ವೀಟ್ ಮಾಡಬೇಡ, ಅದರಲ್ಲಿ ನಮ್ಮ ಹೆಸರಿದೆ’ ಎಂದು ಸಂದೇಶ ರವಾನಿಸಿರುವುದು ವಾಟ್ಸ್ ಆ್ಯಪ್ ಸಂಭಾಷಣೆಯ ಮಾಹಿತಿಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಈ ವಿಷಯದ ಬಗ್ಗೆ ಚರ್ಚೆ ಆರಂಭವಾಗಿದೆ. ಆದ್ದರಿಂದ ಸ್ವಲ್ಪ ಸಮಯ ಏನನ್ನೂ ಮಾತನಾಡಬೇಡ. ನಮ್ಮ ವಿರುದ್ಧ ಕಾನೂನುಬಾಹಿರ ಚಟುವಟಿಕೆ(ತಡೆ)ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು ಎಂದು ಗ್ರೆಟಾಗೆ ದಿಶಾ ಸಂದೇಶ ರವಾನಿಸಿರುವುದು ವಾಟ್ಸ್ ಆ್ಯಪ್ ಸಂದೇಶದಿಂದ ಬಹಿರಂಗವಾಗಿದೆ ಎಂದು ‘ಇಂಡಿಯಾ ಟುಡೆ ಟಿವಿ’ ವರದಿ ಮಾಡಿದೆ. ಈ ಸಂದೇಶದ ಬಳಿಕ, ‘ಇದು ಹಳತಾದ ಟೂಲ್‌ಕಿಟ್’ ಎಂದು ಹೇಳಿ ಗ್ರೆಟಾ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು.

ಬಳಿಕ ತಿದ್ದುಪಡಿ ಮಾಡಿದ ಟೂಲ್‌ಕಿಟ್ ಪೋಸ್ಟ್ ಮಾಡಿದ್ದ ಗ್ರೆಟಾ, ಇದು ಪರಿಷ್ಕರಿಸಿದ ಟೂಲ್‌ಕಿಟ್ ಎಂದು ಹೇಳಿದ್ದರು. ದಿಶಾ ರವಿ ಮೂಲ ಟೂಲ್‌ಕಿಟ್‌ನಲ್ಲಿ ಪರಿಷ್ಕರಣೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಝೂಮ್’ ಸಭೆ: ಪೊಲೀಸರ ತನಿಖೆ

ಟೂಲ್‌ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಹಾಗೂ ಇತರರು, ಟ್ರ್ಯಾಕ್ಟರ್ ರ್ಯಾಲಿಗೂ ಮುನ್ನ ‘ಝೂಮ್’ ಸಭೆ ನಡೆಸಿದ್ದರು ಎಂಬ ವರದಿ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು ‘ಝೂಮ್’ ವೀಡಿಯೊ ಮಾಡಿದವರಿಗೆ ಪತ್ರ ಬರೆದು ವಿವರಣೆ ಕೇಳಿದ್ದಾರೆ ಎಂದು ವರದಿಯಾಗಿದೆ.

ಸುಮಾರು 70ಕ್ಕೂ ಅಧಿಕ ಮಂದಿ ‘ಝೂಮ್’ ಆ್ಯಪ್ ಮೂಲಕ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಾಗತಿಕ ರೈತರ ಮುಷ್ಕರ ಮತ್ತು ‘ಗ್ಲೋಬಲ್ ಡೇ ಆಫ್ ಆ್ಯಕ್ಷನ್, 26 ಜನವರಿ’ ಎಂಬ ಹೆಸರಿನಲ್ಲಿ ಟೂಲ್‌ಕಿಟ್ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ದಿಶಾ ರವಿ, ಮುಂಬೈಯ ನ್ಯಾಯವಾದಿ ನಿಕಿತಾ ಜೇಕಬ್ ಮತ್ತು ಇಂಜಿನಿಯರ್ ಶಂತನು ಮುಲುಕ್ ಟೂಲ್‌ಕಿಟ್ ರೂಪಿಸಿ ಅದನ್ನು ಇತರರಿಗೆ ಪ್ರಸಾರ ಮಾಡಿದ್ದರು. ಇದನ್ನು ಗ್ರೆಟಾ ಥನ್‌ಬರ್ಗ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಟೂಲ್‌ಕಿಟ್ ಪ್ರಕರಣದಲ್ಲಿ ರೈತರ ಮುಖಂಡರ ಪಾತ್ರವಿದೆಯೇ ಮತ್ತು ಟೂಲ್‌ಕಿಟ್ ರಚನೆಗೆ ಆರ್ಥಿಕ ನೆರವಿನ ಮೂಲದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News