ಮೀಶಾ ಕಾದಂಬರಿಗೆ ಕೇರಳ ಸಾಹಿತ್ಯ ಅಕಾಡಮಿ ಪುರಸ್ಕಾರ

Update: 2021-02-16 18:26 GMT

ತಿರುವನಂತಪುರ,ಫೆ.19: 2019ರ ಸಾಲಿನ ಕೇರಳ ಸಾಹಿತ್ಯ ಅಕಾಡಮಿ ಪುರಸ್ಕಾರವನ್ನು ಪ್ರಕಟಿಸಿದ್ದು, ಸಾಹಿತಿ ಎಸ್.ಹರೀಶ್ ಅವರ ಮೀಶಾ (ಮೀಸೆ) ಶ್ರೇಷ್ಠ ಕಾದಂಬರಿಯ ಪುರಸ್ಕಾರಕ್ಕೆ ಪಾತ್ರವಾಗಿದೆ. ಪಿ.ರಾಮನ್ ಅವರ ಕವನ‘ರಾತ್ರಿ ಪಂಡ್ರಂಡಾರಯಕ್ಕ್ ಒರು ತಾರಾಟ್ಟ್ ’(ರಾತ್ರಿ ಹನ್ನೆರಡೂವರೆಗೆ ಒಂದು ಜೋಗಳ) ಅತ್ಯುತ್ತಮ ಕವಿತೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ನಾಟಕ ಸಂಕಲನ ಆರಂಗಿಲೆ ಮತ್ಸಗಂಧಿಕಳ್ ಕೃತಿಗಾಗಿ ಖ್ಯಾತ ನಟಿ ಸಜಿತಾ ಮಡತಿಲ್ ಅಕಾಡಮಿ ಪುರಸ್ಕಾರ ದೊರೆತಿದೆ.

 ಈ ಮೂರು ಪ್ರಶಸ್ತಿಗಳು ತಲಾ 25 ಸಾವಿರ ರೂ., ಪ್ರಶಂಸಾಪತ್ರ ಹಾಗೂ ಪುರಸ್ಕಾರಪತ್ರವನ್ನು ಒಳಗೊಂಡಿರುತ್ತವೆ.

ಖ್ಯಾತ ಲೇಖಕರಾದ ಪಿ. ವತ್ಸಲಾ ಹಾಗೂ ಎನ್.ವಿ.ಪಿ. ಉನ್ನಿತಿರಿ ಅವರಿಗೆ ಅಕಾಡಮಿಯು ಫೆಲೋಶಿಪ್ ಪುರಸ್ಕಾರವನ್ನು ಘೋಷಿಸಿದೆ. ಈ ಫೆಲೋಶಿಪ್‌ಗಳು ತಲಾ 50 ಸಾವಿರ ರೂ., ಎರಡು ಚಿನ್ನದ ನಾಣ್ಯ, ಪ್ರಶಂಸಾ ಪತ್ರ ಹಾಗೂ ಪ್ರಮಾಣಪತ್ರವನ್ನು ಹೊಂದಿದೆ.

ಬಿಜೆಪಿ ತೀವ್ರ ವಿರೋಧ

ಮೀಶಾ ಕಾದಂಬರಿಗೆ ಅಕಾಡಮಿ ಪುರಸ್ಕಾರ ಘೋಷಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಮೀಶಾ ಕಾದಂಬರಿಗೆ ಅಕಾಡಮಿಯ ಈ ನಿರ್ಧಾರವು ಹಿಂದೂ ಸಮುದಾಯದ ವಿರುದ್ಧ ಎಸಗಿದ ಕೃತ್ಯವಾಗಿದೆ. ಶಬರಿಮಲೆ ವಿವಾದದ ಬಳಿಕ ಹಿಂದೂಗಳನ್ನು ಅವಮಾನಿಸುತ್ತಿರುವುದರ ಮುಂದುವರಿದ ಭಾಗ ಇದಾಗಿದೆ’’ ಎಂದು ಬಿಜೆಪಿ ವರಿಷ್ಠ ಕೆ.ಸುರೇಂದ್ರನ್ ತಿಳಿಸಿದ್ದಾರೆ.

ಮಲಯಾಳ ವಾರಪತ್ರಿಕೆ ಮಾತೃಭೂಮಿಯಲ್ಲಿ ಮೀಶಾ ಕಾದಂಬರಿಯ ಕೇವಲ ಮೂರು ಅಧ್ಯಾಯಗಳುಪ್ರಕಟವಾಗಿದ್ದ ಬೆನ್ನಲ್ಲೇ ಸಂಘಪರಿವಾರದ ಕಾರ್ಯ ಕರ್ತರು, ಅದನ್ನು ನಿಲ್ಲಿಸುವಂತೆ ಹರೀಶ್ ಅವರಿಗೆ ಬೆದರಿಕೆಯೊಡ್ಡಿದ್ದರು. ದೇವಾ ಲಯಗಳಿಗೆ ತೆರಳುವ ಮಹಿಳೆಯರನ್ನು ಕಾದಂಬರಿಯಲ್ಲಿ ಅವಮಾನಿಸ ಲಾಗಿದೆಯೆಂದು ಸಂಘಪರಿವಾರದ ಬೆಂಬಲಿಗರು ಆಪಾದಿಸಿದ್ದರು. ಕಾದಂಬರಿಯ ಎರಡು ಪಾತ್ರಗಳ ನಡುವಿನ ಸಂಭಾಷಣೆಯು, ಸಂಘಪರಿವಾರದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಾದಂಬರಿಯ ಪ್ರಕಟಣೆಯನ್ನು ವಾರಪತ್ರಿಕೆಯಲ್ಲಿ ನಿಲ್ಲಿಸಿತಾದರೂ, ಪ್ರಕಾಶನ ಸಂಸ್ಥೆ ಡಿಸಿ ಬುಕ್ ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News