ದಿಶಾ ರವಿ ಕ್ರೈಸ್ತ ಧರ್ಮದವರು ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು: ಕುಟುಂಬ, ಸ್ನೇಹಿತರ ಸ್ಪಷ್ಟೀಕರಣ

Update: 2021-02-17 07:34 GMT

ಹೊಸದಿಲ್ಲಿ: ರೈತರ ಪ್ರತಿಭಟನೆಗಳ ಕುರಿತಂತೆ ಗ್ರೆಟಾ ಥನ್ ಬರ್ಗ್ ಟ್ವೀಟ್ ಮಾಡಿದ ಟೂಲ್ ಕಿಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿ ಪೊಲೀಸರಿಂದ ಬಂಧಿತರಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ, 22 ವರ್ಷದ ದಿಶಾ ರವಿ ಹಿಂದು ಧರ್ಮಕ್ಕೆ ಸೇರಿದವರು ಎಂದು ಆಕೆಯ ಕುಟುಂಬ ಸ್ಪಷ್ಟೀಕರಣ ನೀಡಿದೆ. ಆಕೆಯ ನಿಜ ಹೆಸರು ದಿಶಾ ರವಿ ಜೋಸೆಫ್ ಹಾಗೂ ಆಕೆ ಕ್ರೆಸ್ತ ಧರ್ಮಕ್ಕೆ ಸೇರಿದವರು ಎಂದು ಹಲವಾರು ಟ್ವೀಟ್‌ಗಳು ಹರಿದಾಡಿದ ನಂತರ ಸ್ಪಷ್ಟೀಕರಣ ನೀಡಿರುವ ಆಕೆಯ ಕುಟುಂಬ ಆಕೆಯ ಪೂರ್ಣ ಹೆಸರು ದಿಶಾ ಅಣ್ಣಪ್ಪ ರವಿ ಎಂದು ತಿಳಿಸಿದೆ ಎಂದು thenewsminute.com ವರದಿ ಮಾಡಿದೆ.

ದಿಶಾ ತಾಯಿಯ ಹೆಸರು ಮಂಜುಳಾ ನಾಣಯ್ಯ ಹಾಗೂ ತಂದೆಯ ಹೆಸರು ರವಿ. ಅವರು ತುಮಕೂರು ಜಿಲ್ಲೆಯ ತಿಪಟೂರಿನವರಾಗಿದ್ದಾರೆ ಎಂದು ವಕೀಲರೂ ದಿಶಾ ಕುಟುಂಬದ ಆತ್ಮೀಯ ಸ್ನೇಹಿತರೂ ಆಗಿರವ ಪ್ರಸನ್ನ ಆರ್ ಹೇಳಿದ್ದಾರೆ.

ದಿಶಾ ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎಂಬ ಕುರಿತು ಹರಿದಾಡುತ್ತಿರುವ ಟ್ವೀಟ್‌ಗಳ ಕುರಿತು ಪ್ರತಿಕ್ರಿಯಿಸಿದ ಅವರು "ದಿಶಾ ಯಾವ ಧರ್ಮಕ್ಕೆ ಸೇರಿದವರು ಎಂಬುದು ಇಲ್ಲಿ ಅಪ್ರಸ್ತುತ. ಆಕೆ ಪ್ರಕೃತಿ ಪ್ರೇಮಿ ಹಾಗೂ ಅಸಂಖ್ಯಾತ ಸ್ನೇಹಿತರನ್ನು ಹೊಂದಿದ್ದಾರೆ. ಆಕೆ ಲಿಂಗಾಯತ ಕುಟುಂಬದಲ್ಲಿ ಬೆಳೆದಿದ್ದರೂ ಯಾವುದೇ ಧರ್ಮವನ್ನು ಅನುಸರಿಸುತ್ತಿಲ್ಲ. ಆಕೆಯ ಧರ್ಮದ ಕುರಿತಾದ ಸುದ್ದಿಯ ಮೂಲಕ ಇನ್ನಷ್ಟು ದ್ವೇಷ ಹರಡುವ ಯತ್ನದ ಕುರಿತು ಸ್ಪಷ್ಟೀಕರಣ ನೀಡಬೇಕಾಗಿ ಬಂದಿರುವುದು ದುರದೃಷ್ಟಕರ,'' ಎಂದು ಅವರು ಹೇಳಿದರು.

ಬುಧವಾರ ಬೆಳಗ್ಗಿನಿಂದ ಆಕೆಯ ಹೆಸರು ದಿಶಾ ರವಿ ಜೋಸೆಫ್ ಎಂಬ ಸುದ್ದಿ ಹರಿದಾಡುತ್ತಿದ್ದು, ಆಕೆ ಕೇರಳದ ಸಿರಿಯನ್ ಕ್ರಿಶ್ಚಿಯನ್ ಎಂದೂ ಹೇಳುವ ಟ್ವೀಟ್‌ಗಳಿವೆ.

ಆಕೆ ತನ್ನ ಕೆಲಸಗಳಿಗಾಗಿ ವಿದೇಶಿ ಹಣಕಾಸು ನೆರವು ಪಡೆದಿದ್ದಾರೆಂದು ಕೆಲ ಸುದ್ದಿ ವಾಹಿನಿಗಳು ಪ್ರಸಾರ ಮಾಡಿರುವ ವಿಚಾರವನ್ನೂ ದಿಶಾ ಕುಟುಂಬ ಅಲ್ಲಗಳೆದಿದೆ.

ದಿಶಾ ಹಾಗೂ ಆಕೆಯ ಜತೆಗೆ ಕೆಲಸ ಮಾಡುವ ಸ್ವಯಂಸೇವಕರು ತಮ್ಮ ಖರ್ಚುವೆಚ್ಚಗಳನ್ನು ತಾವೇ ನಿಭಾಯಿಸುತ್ತಿದ್ದರು ಹಾಗೂ ಅಗತ್ಯ ವಸ್ತುಗಳ  ಖರ್ಚುಗಳನ್ನು ಶೇರ್ ಮಾಡುತ್ತಿದ್ದರು ಎಂದು ಆಕೆಯ ಸ್ನೇಹಿತೆಯರು ಹೇಳಿದ್ದಾರೆ.

ಆಕೆಯ ಬಂಧನದ ನಂತರ ಆಕೆಗೆ ಸಂಬಂಧಿಸಿದ್ದು ಎಂದು ಹೇಳಿಕೊಂಡು ಹಲವು ಟ್ವಿಟ್ಟರ್ ಖಾತೆಗಳು ಕಾಣಿಸಿಕೊಂಡಿವೆ, ಆದರೆ ಆಕೆಯ ಪರವಾಗಿ ಕುಟುಂಬದ ಯಾರೂ ಟ್ವೀಟ್ ಮಾಡುತ್ತಿಲ್ಲ ಎಂದು ಆಕೆಯ ಕುಟುಂಬ ಸ್ಪಷ್ಟ ಪಡಿಸಿದೆ.

@climatedisha ಎಂಬ ಟ್ವಿಟ್ಟರ್ ಹ್ಯಾಂಡಲ್‌ಗೆ 6000 ಫಾಲೋವರ್ಸ್ ಹಾಗೂ 24,000 ಲೈಕ್‌ಗಳಿದ್ದು ಮೊದಲು ಇದು ದಿಶಾ ರವಿಯ ಸೋದರಿ ಎಂದು ಹೇಳಲಾಗಿತ್ತು.  ಆದರೆ ದಿಶಾ ತಮ್ಮ ಹೆತ್ತವರ ಏಕೈಕ ಪುತ್ರಿಯಾಗಿದ್ದಾರೆ. ನಂತರ ಈ ಹ್ಯಾಂಡಲ್ ನಡೆಸುತ್ತಿರುವುದು ಆಕೆಯ ಸೋದರ ಸಂಬಂಧಿ ಎಂದು ಹೇಳಲಾಯಿತು. ಇದನ್ನೂ ಆಕೆಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News