ದನಿಯೆತ್ತುವವರ ಸದ್ದಡಗಿಸುವ ಉದ್ದೇಶದಿಂದ ದೇಶದ್ರೋಹದ ಕಾನೂನು ಹೇರುವ ಹಾಗಿಲ್ಲ: ದಿಲ್ಲಿ ಕೋರ್ಟ್

Update: 2021-02-17 08:45 GMT

ಹೊಸದಿಲ್ಲಿ: ದನಿಯೆತ್ತುವವರ ಸದ್ದಡಗಿಸುವ ಉದ್ದೇಶದಿಂದ ದೇಶದ್ರೋಹದ ಕಾನೂನನ್ನು ಕಿಡಿಗೇಡಿಗಳನ್ನು ಹತ್ತಿಕ್ಕುವ ನೆಪದಲ್ಲಿ ಹೇರುವ ಹಾಗಿಲ್ಲ ಎಂದು ದಿಲ್ಲಿಯ ನ್ಯಾಯಾಲಯ ಹೇಳಿದೆ ಎಂದು thewire.in ವರದಿ ಮಾಡಿದೆ.

ರೈತರ ಪ್ರತಿಭಟನೆ ವೇಳೆ ಫೇಸ್ಬುಕ್ಕಿನಲ್ಲಿ ನಕಲಿ ವೀಡಿಯೋ ಪೋಸ್ಟ್ ಮಾಡಿದ್ದಾರೆಂಬ ಆರೋಪದಲ್ಲಿ ದಿಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ದೇವಿ ಲಾಲ್ ಬುರ್ದಕ್ ಹಾಗೂ ಸ್ವರೂಪ್ ರಾಮ್ ಎಂಬಿಬ್ಬರು ವ್ಯಕ್ತಿಗಳಿಗೆ ಜಾಮೀನು ಮಂಜೂರುಗೊಳಿಸುವ ಸಂದರ್ಭ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಮೇಲಿನಂತೆ ಹೇಳಿದ್ದಾರೆ.

ಐಪಿಸಿಯ ಸೆಕ್ಷನ್ 124ಎ (ದೇಶದ್ರೋಹದ) ಕಾನೂನನ್ನು ಈ ನಿರ್ದಿಷ್ಟ ಪ್ರಕರಣದಲ್ಲಿ ಹೇರಿರುವುದು ಗಂಭೀರವಾದ ಹಾಗೂ ಚರ್ಚಾಸ್ಪದ ವಿಚಾರ ಎಂದು ನ್ಯಾಯಾಲಯ ಹೇಳಿದೆ.

"ದೇಶದ್ರೋಹದ ಕಾನೂನು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರದ ಬಳಿಯಿರುವ ಶಕ್ತಿಶಾಲಿ ಅಸ್ತ್ರವಾದರೂ ಅಸಮ್ಮತಿ ಸೂಚಿಸುವವರ ದನಿಯಡಗಿಸಲು ಅದನ್ನು ಬಳಸುವಂತಿಲ್ಲ,'' ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದ ಇಬ್ಬರು ಆರೋಪಿಗಳಿಗೂ ರೂ. 50,000 ಬಾಂಡ್ ಆಧಾರದಲ್ಲಿ ಜಾಮೀನು ನೀಡುವಂತೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News