ಗದ್ದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮೂವರು ದಲಿತ ಬಾಲಕಿಯರು ಪತ್ತೆ; ಇಬ್ಬರು ಮೃತ್ಯು, ಓರ್ವ ಬಾಲಕಿ ಗಂಭೀರ

Update: 2021-02-18 17:21 GMT
Photo: Sabrangindia

ಉನ್ನಾವೊ, ಫೆ. 18: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೃತದೇಹ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ಹೊಲವೊಂದರಲ್ಲಿ ಬುಧವಾರ ಪತ್ತೆಯಾಗಿದೆ. ಅದೇ ಸ್ಥಳದಲ್ಲಿ ಇನ್ನೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಘಟನೆ ಬಗ್ಗೆ ಸಿಬಿಐ ತನಿಖೆಯ ಆಗ್ರಹ ಕೇಳಿಬಂದಿದೆ. ಮೃತಪಟ್ಟ ಇಬ್ಬರು ಬಾಲಕಿಯರ ವಯಸ್ಸು 13 ಹಾಗೂ 16 ಆಗಿದ್ದರೆ, ಮೂರನೇ ಬಾಲಕಿಯ ವಯಸ್ಸು 17. ಇಬ್ಬರು ಬಾಲಕಿಯರು ಸಹೋದರಿಯರು ಹಾಗೂ 13 ವರ್ಷದ ಬಾಲಕಿ ಇವರ ಸೋದರ ಸಂಬಂಧಿ. ಉನ್ನಾವೊ ಜಿಲ್ಲೆಯ ಅಸೋಹಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂವರು ಬಾಲಕಿಯರು ಜಾನುವಾರುಗಳಿಗೆ ಮೇವು ತರಲು ಮನೆಯಿಂದ ತೆರಳಿದ್ದರು. ಆದರೆ, ಎಷ್ಟು ಹೊತ್ತಾದರೂ ಹಿಂದಿರುಗಿ ಬಂದಿರಲಿಲ್ಲ.

ಬಾಲಕಿಯರ ಕುಟುಂಬಿಕರು ಹಾಗೂ ಗ್ರಾಮದ ಇತರ ನಿವಾಸಿಗಳು ಅವರಿಗಾಗಿ ಶೋಧ ನಡೆಸಿದರು. ಈ ಸಂದರ್ಭ ಮೂವರು ಬಾಲಕಿಯರು ಹೊಲದಲ್ಲಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು ಬಾಲಕಿಯರನ್ನು ಉನ್ನಾವೊ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ಮೂವರು ಬಾಲಕಿಯರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದು ವಿಷ ಸೇವನೆಯ ಪ್ರಕರಣವಾಗಿರುವ ಸಾಧ್ಯತೆ ಇದೆ. ಸ್ಥಳದಲ್ಲಿ ಕೊಸರಾಡಿದ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಮೇಲ್ನೋಟಕ್ಕೆ ಬಾಲಕಿಯರ ದೇಹದ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಬಾಲಕಿಯರು ಕೈ ಹಾಗೂ ಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಬಾಲಕಿಯರ ಸಹೋದರ ಪ್ರತಿಪಾದಿಸಿದ್ದಾರೆ.

ಬಾಲಕಿಯರ ಕೈಕಾಲುಗಳನ್ನು ಕಟ್ಟಲಾಗಿತ್ತೇ ಎಂಬ ಬಗ್ಗೆ ಪೊಲೀಸರು ಇದುವರೆಗೆ ದೃಢಪಡಿಸಿಲ್ಲ ಎಂದು ಲಕ್ನೋ ವಲಯದ ಐಜಿ ಲಕ್ಷೀ ಸಿಂಗ್ ತಿಳಿಸಿದ್ದಾರೆ. ‘‘ಬಾಲಕಿಯರ ಸಹೋದರ ಈ ಹೇಳಿಕೆ ನೀಡಿದ್ದಾನೆ. ಆದರೆ, ಪೊಲೀಸರು ಸ್ಥಳಕ್ಕೆ ತಲಪುವ ಮೊದಲೇ ಮೃತದೇಹವನ್ನು ತೆಗೆಯಲಾಗಿತ್ತು. ಆದುದರಿಂದ ನಾವು ಇದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ’’ ಎಂದು ಸಿಂಗ್ ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ವಿಷ ಸೇವನೆಯ ಪ್ರಕರಣದಂತೆ ಕಂಡು ಬಂದಿದೆ.

ಬಾಲಕಿಯರ ಬಾಯಿಯಿಂದ ಬಿಳಿ ನೊರೆ ಹೊರಬರುತ್ತಿತ್ತು. ಮರಣೋತ್ತರ ಪರೀಕ್ಷೆಯ ವರದಿ ದೊರಕಿದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಬಹುದು. ಸಂಬಂಧಿತ ಎಲ್ಲರ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ನಡೆಸಲಿದ್ದೇವೆ ಎಂದು ಉನ್ನಾವೊ ಪೊಲೀಸ್ ಅಧೀಕ್ಷಕ ಸುರೇಶ್ ರಾವ್ ಎ. ಕುಲಕರ್ಣಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವುದಕ್ಕೆ ಇದು ಇನ್ನೊಂದು ನಿದರ್ಶನ ಎಂದು ಹೇಳಿದೆ.

ವೀಡಿಯೊವೊಂದರಲ್ಲಿ ಬಾಲಕಿಯರ ಸಹೋದರ, ಬಾಲಕಿಯರು ಕೈಕಾಲುಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಪ್ರತಿಪಾದಿಸಿರುವುದು ದಾಖಲಾಗಿದೆ. ಇದು ಬಾಲಕಿಯರ ಕೈಕಾಲುಗಳನ್ನು ಕಟ್ಟಿದ್ದರೆ, ಅವರು ವಿಷ ಹೇಗೆ ಕುಡಿದರು ಎಂಬ ಪ್ರಶ್ನೆಯನ್ನು ಸ್ಥಳೀಯರಲ್ಲಿ ಹುಟ್ಟು ಹಾಕಿದೆ. ಇನ್ನೊಂದು ವೀಡಿಯೊದಲ್ಲಿ ಬಾಲಕಿಯೋರ್ವಳ ತಾಯಿ, ಬಾಲಕಿಯರ ಕೈಕಾಲುಗಳನ್ನು ಕಟ್ಟಿರಲಿಲ್ಲ. ನಮಗೆ ಯಾರ ಬಗ್ಗೆಯೂ ಅನುಮಾನ ಇಲ್ಲ ಎಂದು ಹೇಳಿರುವುದು ಕೇಳಿ ಬಂದಿದೆ. 

ಈ ನಡುವೆ 13 ವರ್ಷದ ಬಾಲಕಿಯ ಅತ್ತಿಗೆ, ‘‘ನಾವು ಸುರಕ್ಷಿತರಲ್ಲ. ಈ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸುವ ಅಗತ್ಯ ಇದೆ’’ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News