ದಿಶಾ ರವಿಗೆ ಬೆಂಬಲ ನೀಡಿದ್ದನ್ನು ಟ್ರೋಲ್‌ ಮಾಡಿದ್ದಕ್ಕೆ 'ತೀಕ್ಷ್ಣ ಪ್ರತ್ಯುತ್ತರ' ನೀಡಿದ ನಟ ಸಿದ್ದಾರ್ಥ್

Update: 2021-02-18 09:51 GMT

ಹೊಸದಿಲ್ಲಿ: ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್ ಕಿಟ್ ಪ್ರಕರಣದಲ್ಲಿ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ  ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿರುವ  ನಟ ಸಿದ್ಧಾರ್ಥ್ ಈಗ ಬಿಜೆಪಿ ಜತೆ ನಂಟು ಹೊಂದಿರುವ ಮಂದಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ  ಟೀಕೆಗೊಳಗಾಗುತ್ತಿದ್ದಾರೆ. ಬುಧವಾರ ಬಿಜೆಪಿ ರಾಷ್ಟ್ರೀಯ ಪ್ರಣಾಳಿಕೆ ಉಪಸಮಿತಿಯ ಸದಸ್ಯೆಯಾಗಿದ್ದ ಕರುಣಾ ಗೋಪಾಲ್ ಅವರು ಸಿದ್ದಾರ್ಥ್ ಅವರ ಇತ್ತೀಚಿಗಿನ ಟ್ವೀಟ್ ಕುರಿತು ಪ್ರತಿಕ್ರಿಯಿಸಿ ಅವರ ಹೇಳಿಕೆಗಳು ಆಧಾರ ರಹಿತ ಹಾಗೂ ಪ್ರಚೋದನಾತ್ಮಕ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಆತ "ಶಾಲೆಯನ್ನು ಅರ್ಧದಲ್ಲಿಯೇ ತ್ಯಜಿಸಿದವರಾಗಿರಬಹುದು" ಎಂದೂ ಬರೆದಿದ್ದಾರೆ.

ಈ ನಿರ್ದಿಷ್ಟ ಟ್ವೀಟ್‍ನಲ್ಲಿ ಸಿದ್ಧಾರ್ಥ್ ಅವರು ʼಟೂಲ್ ಕಿಟ್ʼ ಕುರಿತು ವಿವರಿಸಿ ಸ್ನೇಹಿತರು ಜತೆಯಾಗಿ  ಸಿನೆಮಾ ನೋಡಲು ಮಾಡುವ ಯೋಜನೆಗೆ ಅದನ್ನು ಹೋಲಿಸಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಸಿದ್ದಾರ್ಥ್ ತಾವು ಕರುಣಾ ಅವರ  ಒತ್ತಡಕ್ಕೆ  2009ರಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‍ನಲ್ಲಿ ಚರ್ಚಾ ಕಾರ್ಯಕ್ರಮಕ್ಕೆ ಲೋಕಸತ್ತಾ ಪಕ್ಷದ ಜಯಪ್ರಕಾಶ್ ನಾರಾಯಣ್ ಜತೆಗೆ ಹೋಗಿದ್ದಾಗಿ ಬರೆದಿದ್ದಾರೆ. "ಆಗ ನಾನೊಬ್ಬ ಸ್ನಾತ್ತಕೋತ್ತರ ಪದವೀಧರನಾಗಿದ್ದೆ ಹಾಗೂ ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿದೆ. ಆದರೆ ಆಕೆ ತಮ್ಮ ನಿಯತ್ತು ಹಾಗೂ ಬುದ್ಧಿಯನ್ನೂ ತಮ್ಮ  ಮಾಲಿಕರಿಗೆ ಮಾರಿಬಿಟ್ಟಿದ್ದಾರೆ. ಈಗ  ಅವರು ಮೋದಿಯ  ಸುಳ್ಳುಗಳನ್ನು ಹರಡುತ್ತಿದ್ದಾರೆ,'' ಎಂದು ಸಿದ್ಧಾರ್ಥ್ ಬರೆದಿದ್ದಾರೆ.

ತನ್ನ ಭಾಷಣದ ವೀಡಿಯೋ ಕೂಡ ಶೇರ್ ಮಾಡಿದ ಸಿದ್ಧಾರ್ಥ್, "ನಾನು ಕಳಪೆ ಪತ್ರಿಕೋದ್ಯಮ, ಮರೆಗುಳಿ ಜನರು ಹಾಗೂ ಅಸಮರ್ಥ ಆಡಳಿತದ  ಬಗ್ಗೆ ಮಾತನಾಡಿದ್ದೆ. ಆಗ ನಾನು ಯುವಕನಾಗಿದ್ದೆ ಹಾಗೂ ಸಿಟ್ಟುಗೊಂಡಿದ್ದೆ. ಈಗ ನಾನು ಇನ್ನಷ್ಟು ಯುವಕನಾಗಿದ್ದೇನೆ ಹಾಗೂ ಇನ್ನಷ್ಟು ಕೋಪಗೊಂಡಿದ್ದೇನೆ" ಎಂದು ಬರೆದಿದ್ದಾರೆ.

"ಆಗ ನನ್ನ ಭಾಷಣಕ್ಕೆ ಯಾರಿದಂದಲೂ ಬೆದರಿಕೆ ಬಂದಿರಲಿಲ್ಲ. ನನ್ನ ಅಭಿಪ್ರಾಯಕ್ಕೆ ಯಾರೂ ನನ್ನನು ಟಾರ್ಗೆಟ್ ಮಾಡಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ ನಮ್ಮ ಕಣ್ಣೆದುರೇ ಬದಲಾಗಿದೆ. ಇದರ ಬಗ್ಗೆ ನಾವೇನು ಮಾಡುತ್ತೇವೆ ಎಂಬುದೇ ಪ್ರಶ್ನೆಯಾಗಿದೆ" ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News