×
Ad

ಟೈಮ್ ನಿಯತಕಾಲಿಕೆಯ 'ವರ್ಷದ 100 ಉದಯೋನ್ಮುಖ ನಾಯಕ'ರ ಪಟ್ಟಿಯಲ್ಲಿ ಭೀಮ್‌ ಆರ್ಮಿಯ ಚಂದ್ರಶೇಖರ ಆಝಾದ್

Update: 2021-02-18 16:45 IST

ನ್ಯೂಯಾರ್ಕ್,ಫೆ.18: ಟ್ವಿಟರ್‌ನ ಹಿರಿಯ ನ್ಯಾಯವಾದಿ ವಿಜಯಾ ಗಡ್ಡೆ ಮತ್ತು ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಕ್ ಸೇರಿದಂತೆ ಐವರು ಭಾರತೀಯ ಮೂಲದ ಗಣ್ಯರು ಹಾಗೂ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಟೈಮ್ ಮ್ಯಾಗಝಿನ್ ಸಿದ್ಧಪಡಿಸಿರುವ ‘ಭವಿಷ್ಯವನ್ನು ರೂಪಿಸುತ್ತಿರುವ ನೂರು ಉದಯೋನ್ಮುಖ ನಾಯಕರ ವಾರ್ಷಿಕ ಪಟ್ಟಿ’ಯಲ್ಲಿ ಸ್ಥಾನ ಪಡೆದಿದ್ದಾರೆ.

 ವಿಶ್ವದಲ್ಲಿಯ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿ ಟೈಮ್ 100ರ ಮುಂದುವರಿದ ಭಾಗವಾಗಿರುವ ಟೈಮ್ 100 ನೆಕ್ಸ್ಟ್ ಭವಿಷ್ಯವನ್ನು ರೂಪಿಸುತ್ತಿರುವ 100 ಪ್ರಭಾವಿ ನಾಯಕರನ್ನು ಒಳಗೊಂಡಿದೆ.

 ಈ ಪಟ್ಟಿಯಲ್ಲಿಯ ಪ್ರತಿಯೊಬ್ಬರೂ ಇತಿಹಾಸವನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ವಾಸ್ತವದಲ್ಲಿ ಈ ಪೈಕಿ ಹಲವರು ಈಗಾಗಲೇ ಇತಿಹಾಸವನ್ನು ಸ್ಥಾಪಿಸಿದ್ದಾರೆ ಎಂದು ಟೈಮ್ 100ರ ಸಂಪಾದಕೀಯ ನಿರ್ದೇಶಕ ಡ್ಯಾನ್ ಮಕ್ಸಾಯ್ ಅವರು ಬುಧವಾರ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು.

ಇನ್‌ಸ್ಟಾಕಾರ್ಟ್ ಸ್ಥಾಪಕಿ ಹಾಗೂ ಸಿಇಒ ಅಪೂರ್ವಾ ಮೆಹ್ತಾ,ವೈದ್ಯೆ ಹಾಗೂ ಎನ್‌ಜಿಒ ಗೆಟ್ ಅಸ್ ಪಿಪಿಇ ಕಾರ್ಯಕಾರಿ ನಿರ್ದೇಶಕಿ ಶಿಖಾ ಗುಪ್ತಾ,ಎನ್‌ಜಿಒ ಅಪ್‌ಸಾಲ್ವ್‌ನ ಸ್ಥಾಪಕ ರೋಹನ ಪವುಲುರಿ ಅವರೂ ಈ ಪಟ್ಟಿಯಲ್ಲಿರುವ ಭಾರತೀಯ ಮೂಲದ ವ್ಯಕ್ತಿಗಳಾಗಿದ್ದಾರೆ.

ಒಂದು ವರ್ಷಕ್ಕೂ ಹಿಂದೆ ಬ್ರಿಟಿಷ್ ಸರಕಾರದಲ್ಲಿ ಹೆಚ್ಚು ಪರಿಚಿತರಲ್ಲದ ಕಿರಿಯ ಸಚಿವರಾಗಿದ್ದ ಸುನಕ್ ಕಳೆದ ವರ್ಷ ಹಣಕಾಸು ಸಚಿವರಾಗಿ ನೇಮಕಗೊಂಡ ಬಳಿಕ ಕೋರೋನವೈರಸ್ ಲಾಕ್‌ಡೌನ್‌ನಿಂದಾಗಿ ಉದ್ಯೋಗಗಳನ್ನು ಕಳೆದುಕೊಂಡಿದ್ದ ಹಲವಾರು ಬ್ರಿಟಿಷ್ ಪ್ರಜೆಗಳಿಗೆ ಭಾರೀ ಪ್ರಮಾಣದಲ್ಲಿ ಆರ್ಥಿಕ ನೆರವಿಗೆ ಒಪ್ಪಿಗೆ ನೀಡುವ ಮೂಲಕ ಸರಕಾರದಿಂದ ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಟೈಮ್ ಹೇಳಿದೆ.

ಮೆಹ್ತಾ ಕುರಿತಂತೆ ಟೈಮ್,ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ದಿನಸಿ ಸಾಮಗ್ರಿಗಳಿಗಾಗಿ ಬೇಡಿಕೆಯ ಮಹಾಪೂರವೇ ಇನ್‌ಸ್ಟಾಕಾರ್ಟ್‌ಗೆ ಹರಿದು ಬಂದಿತ್ತು ಮತ್ತು ಮೆಹ್ತಾ ಅದನ್ನು ಸಮರ್ಥವಾಗಿ ನಿರ್ವಹಿಸಿದ್ದರು ಎಂದಿದೆ.

ಗದ್ದೆಯವರನ್ನು ಟ್ವಿಟರ್‌ನ ಅತ್ಯಂತ ಶಕ್ತಿಶಾಲಿ ಅಧಿಕಾರಿಗಳಲ್ಲೋರ್ವರು ಎಂದು ಬಣ್ಣಿಸಿರುವ ಟೈಮ್,ಜ.6ರಂದು ಕ್ಯಾಪಿಟಲ್ ಹಿಲ್‌ನ ಮೇಲೆ ದಾಳಿಯ ಬಳಿಕ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿದ್ದನ್ನು ಸಿಇಒ ಜಾಕ್ ಡೊರ್ಸೆ ಅವರಿಗೆ ತಿಳಿಸಿದ ಮೊದಲಿಗರಾಗಿದ್ದರು. ಅವರು ಎಲ್ಲ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಿದ್ದ 2019ರ ಟ್ವಿಟರ್ ನಿರ್ಣಯದ ಹಿಂದಿನ ರೂವಾರಿಯಾಗಿದ್ದರು ಎಂದಿದೆ.

ಆಝಾದ್ ಶಿಕ್ಷಣದ ಮೂಲಕ ಬಡತನದಿಂದ ಪಾರಾಗಲು ದಲಿತರಿಗೆ ನೆರವಾಗುವ ನಿಟ್ಟಿನಲ್ಲಿ ಶಾಲೆಗಳನ್ನು ನಡೆಸುತ್ತಿರುವ ಭೀಮ್ ಆರ್ಮಿಯ ಮುಖ್ಯಸ್ಥರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಆಧಾರಿತ ಹಿಂಸಾಚಾರದಿಂದ ಜನರನ್ನು ರಕ್ಷಿಸಲು ಮತ್ತು ತಾರತಮ್ಯದ ವಿರುದ್ಧ ಜನರಲ್ಲಿ ಅರಿವು ಮೂಡಿಸಲೂ ಭೀಮ್ ಆರ್ಮಿಯು ಶ್ರಮಿಸುತ್ತಿದೆ ಎಂದು ಟೈಮ್ ಪ್ರಶಂಸಿಸಿದೆ.

ಶ್ವೇತಭವನದಲ್ಲಿ ನಾಯಕತ್ವದ ಕೊರತೆಯಿದ್ದಾಗ ಕೋವಿಡ್-19ರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ರೋಗಿಗಳಿಗೆ ನೆರವಾಗಲು ಆರೋಗ್ಯ ಕಾರ್ಯಕರ್ತರಿಗೆ ಭಾರೀ ಪ್ರಮಾಣದಲ್ಲಿ ಪಿಪಿಇ ಕಿಟ್‌ಗಳನ್ನು ಲಭ್ಯವಾಗಿಸಲು ಗುಪ್ತಾ ಮತ್ತು ಅವರ ತಂಡವು ಪ್ರಮುಖ ಪಾತ್ರವನ್ನು ವಹಿಸಿತ್ತು ಎಂದು ಹೇಳಿರುವ ಟೈಮ್,ಪವುಲುರಿ ತನ್ನ ಫ್ರೀ ಆನ್‌ಲೈನ್ ಟೂಲ್ ಮೂಲಕ ಹಲವರು ಅಮೆರಿಕನ್ನರಿಗೆ ದಿವಾಳಿತನ ಅರ್ಜಿಗಳನ್ನು ಸ್ವತಃ ತುಂಬಲು ನೆರವಾಗಿದ್ದರು ಮತ್ತು ಅವರನ್ನು ಕಾನೂನು ವೆಚ್ಚಗಳ ಹೊರೆಯಿಂದ ಪಾರು ಮಾಡಿದ್ದರು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News