ದಿಲ್ಲಿಯಲ್ಲಿ ವಾಯುಮಾಲಿನ್ಯಕ್ಕೆ 50 ಸಾವಿರಕ್ಕೂ ಹೆಚ್ಚು ಸಾವು: ವರದಿ
ಹೊಸದಿಲ್ಲಿ, ಫೆ.18: ದಿಲ್ಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಕಳೆದ ವರ್ಷ 54,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೊಸ ಅಧ್ಯಯನ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.
ಉಸಿರಾಡುವ ಗಾಳಿಯಲ್ಲಿ ಅಪಾಜ್ಞೂ ಪಿಎಂ2.5 ಕಣಗಳು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ನಿಗದಿಪಡಿಸಿದ ಮಟ್ಟಕ್ಕಿಂತ ಸುಮಾರು 6 ಪಟ್ಟು ಅಧಿಕವಿರುವ ವಾಯುಮಾಲಿನ್ಯದಿಂದಾಗಿ 2020ರಲ್ಲಿ ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ಸುಮಾರು 54,000 ಮರಣ ಸಂಭವಿಸಿವೆ . ದಿಲ್ಲಿಯಲ್ಲಿ ಸಂಭವಿಸಿದ ಪ್ರತೀ ಒಂದು ಮಿಲಿಯನ್ ಸಾವಿನಲ್ಲಿ 1,800 ಸಾವು ಪಿಎಂ2.5 ವಾಯುಮಾಲಿನ್ಯದಿಂದ ಸಂಭವಿಸುತ್ತದೆ ಎಂದು ‘ಗ್ರೀನ್‌ಪೀಸ್ ಆಗ್ನೇಯ ಏಶ್ಯಾ ವಾಯುಗುಣಮಟ್ಟ ದತ್ತಾಂಶ ಮಾಹಿತಿ’ ವರದಿಯಲ್ಲಿ ತಿಳಿಸಲಾಗಿದೆ.
ಜಾಗತಿಕವಾಗಿ ವರದಿಯಾಗುವ ಸಾವಿನ ಪ್ರಕರಣಗಳಲ್ಲಿ ವಾಯು ಗುಣಮಟ್ಟವು ಪಿಎಂ 2.5 ಹಂತಕ್ಕೆ ಕುಸಿಯುವುದು ಪ್ರಮುಖ ಅಂಶವಾಗಿದ್ದು 2015ರಲ್ಲಿ ಜಾಗತಿಕವಾಗಿ ಸಂಭವಿಸಿದ 4.2 ಮಿಲಿಯನ್ ಅಕಾಲಿಕ ಮರಣಕ್ಕೆ ಕಾರಣವಾಗಿದೆ. 2020ರಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ, ತಪ್ಪಿಸಬಹುದಾದ ಸಾವಿನ ಪ್ರಕರಣಗಳ ಸಂಖ್ಯೆ ಮುಂಬೈಯಲ್ಲಿ ಸುಮಾರು 25,000 ಆಗಿದ್ದರೆ ಬೆಂಗಳೂರಿನಲ್ಲಿ 12,000, ಚೆನ್ನೈಯಲ್ಲಿ 11,000, ಹೈದರಾಬಾದ್‌ನಲ್ಲಿ 11,000 ಮತ್ತು ಲಕ್ನೊದಲ್ಲಿ 6,700 ಎಂದು ವರದಿ ತಿಳಿಸಿದೆ.
ದಿಲ್ಲಿಯಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಆರ್ಥಿಕ ನಷ್ಟದ ಪ್ರಮಾಣ 58,895 ಕೋಟಿ ರೂ. ಆಗಿದ್ದು ಇದು ದಿಲ್ಲಿಯ ವಾರ್ಷಿಕ ಜಿಡಿಪಿಯ 13ಶೇ. ಆಗಿದೆ. ವಿಶ್ವದಲ್ಲಿ ಪಿಎಂ2.5 ವಾಯುಮಾಲಿನ್ಯದಿಂದ ಸಂಭವಿಸುವ ಸಾವಿನ ಪ್ರಕರಣದಲ್ಲಿ ಸುಮಾರು 1,60,000 ಪ್ರಕರಣಗಳು ವಿಶ್ವದ ಅತ್ಯಧಿಕ ಜನಸಾಂದ್ರತೆಯ ರಾಜಧಾನಿಗಳಲ್ಲಿ ವರದಿಯಾಗಿದೆ . ದಿಲ್ಲಿ, ಮೆಕ್ಸಿಕೊ ಸಿಟಿ, ಸಾವೊಪಾಲೊ, ಶಾಂಘೈ ಮತ್ತು ಟೋಕಿಯೊ ಈ ನಗರಗಳಾಗಿವೆ ಎಂದು ವರದಿ ಹೇಳಿದೆ. ಈ ವರ್ಷ ಲಾಕ್‌ಡೌನ್‌ನಿಂದಾಗಿ ವಾಯು ಗುಣಮಟ್ಟ ಸ್ವಲ್ಪ ಉತ್ತಮವಾಗಿದ್ದರೂ, ವಾಯುಮಾಲಿನ್ಯ ಎಂಬುದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಮಸ್ಯೆಯಾಗಿಯೇ ಮುಂದುವರಿದಿದ್ದು ಆರ್ಥಿಕತೆಯ ಮೇಲೆಯೂ ತೀವ್ರ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಹಸಿರು ಮತ್ತು ಸುಸ್ಥಿರ ಪರಿಹಾರೋಪಾಯ ಹುಡುಕುವ ಅಗತ್ಯವಿದೆ.
ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನದ ಬದಲು ಪೆಟ್ರೋಲಿಯಂ ತೈಲವನ್ನೇ ಹೆಚ್ಚಾಗಿ ಅವಲಂಬಿಸಿದರೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತದಿಂದ ಸಂಭವಿಸುವ ಸಾವಿನ ಪ್ರಮಾಣ ಹೆಚ್ಚುತ್ತದೆ ಮತ್ತು ಅಸ್ತಮಾ, ಕೊರೋನ ಸೋಂಕಿನ ಲಕ್ಷಣಗಳನ್ನು ತೀವ್ರಗೊಳಿಸುತ್ತದೆ ಎಂದು ‘ಗ್ರೀನ್‌ಪೀಸ್ ಇಂಡಿಯಾ’ದ ಅಧಿಕಾರಿ ಅವಿನಾಶ್ ಚಂಚಲ್ ಹೇಳಿದ್ದಾರೆ. ನಗರದ ಜನತೆ ಸಾಧ್ಯವಾದಷ್ಟು ನಡಿಗೆ, ಸೈಕಲ್ ಬಳಸುವುದು ಅಥವಾ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಬೇಕು. ಜೊತೆಗೆ ನವೀಕರಿಸಬಹುದಾದ ಇಂಧನ ಬಳಸುವ ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡಬೇಕಾಗಿದೆ. ನವೀಕರಿಸಬಹುದಾದ ಇಂಧನ ಬಳಸಿದ ಸಾರಿಗೆ ವ್ಯವಸ್ಥೆಯಿಂದ ದೇಶದ ಅರ್ಥವ್ಯವಸ್ಥೆಯೂ ಸದೃಢವಾಗುತ್ತದೆ ಎಂದವರು ಹೇಳಿದ್ದಾರೆ.