ಪ್ರತಿಭಟನೆಯ ವೇಳೆ ಸಾವಿಗೀಡಾದ ರೈತನ ಮೃತದೇಹವನ್ನು ಇಲಿಗಳು ಕಿತ್ತು ತಿನ್ನಲು ಬಿಟ್ಟ ಹರ್ಯಾಣ ಆಸ್ಪತ್ರೆ

Update: 2021-02-19 10:45 GMT

ಚಂಡೀಗಡ: ದಿಲ್ಲಿ ಹಾಗೂ ಹರ್ಯಾಣ ನಡುವಿನ ಗಡಿ ಕುಂಡ್ಲಿ ಬಾರ್ಡರ್ ನಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 70ರ ವಯಸ್ಸಿನ ರೈತ ಹೃದಯಾಘಾತದಿಂದ ಮೃತಪಟ್ಟಿದ್ದು, ಶವಪರೀಕ್ಷೆಗಾಗಿ ಸೋನಿಪತ್ ನ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ವೇಳೆ ಇಲಿಗಳು ಮೃತದೇಹವನ್ನು ಕಚ್ಚಿ ಗಾಯಗೊಳಿಸಿದ್ದು, ಬೆಳಕಿಗೆ ಬಂದಿದ್ದು ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ದ ರೈತರು,ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಸ್ಥಳದ ಸಮೀಪವಿರುವ ತನ್ನ ಹಳ್ಳಿಯಲ್ಲಿ ವಯೋವೃದ್ಧ ರಾಜೇಂದ್ರ ಸರೊಹ್ ಬುಧವಾರ ಮೃತಪಟ್ಟಿದ್ದರು. ಸಾವಿಗೆ ಕಾರಣವನ್ನು ಖಚಿತಪಡಿಸಲು ಗುರುವಾರ ಶವಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. 
ಶವವನ್ನು ಫ್ರೀಝರ್ ನಿಂದ ಹೊರತೆಗೆದಾಗ ಮುಖ ಹಾಗೂ ಕಾಲಿನ ಭಾಗವನ್ನು  ಇಲಿಗಳು ತಿಂದಿರುವುದು ಕಂಡುಬಂದಿದೆ. 

 ಕಾಂಗ್ರೆಸ್ ಪಕ್ಷ ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಳೆದ 73 ವರ್ಷಗಳಲ್ಲಿ ಇಂತಹ ನೋವಿನ ಪರಿಸ್ಥಿತಿಗೆ ನಾವು ಸಾಕ್ಷಿಯಾಗಿರಲಿಲ್ಲ ಎಂದು ಹೇಳಿದೆ.

ಸೋನಿಪತ್ ನ ಬೈಯನ್ ಪುರದ ಗ್ರಾಮದ ರೈತ ರಾಜೇಂದ್ರ ಈಗ ಕೇಂದ್ರದ ಕೃಷಿಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬುಧವಾರ ರಾತ್ರಿ ಅವರಿಗೆ ಏಕಾಏಕಿ ಅನಾರೋಗ್ಯ ಕಾಡಿದ್ದು, ಸೋನಿಪತ್ ನ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಗೆ ತಲುಪುವಾಗ ಅವರು ಮೃತಪಟ್ಟಿದ್ದರು. 3 ತಿಂಗಳ ಹಿಂದೆ ರೈತರ ಪ್ರತಿಭಟನೆ ಆರಂಭವಾದ ಬಳಿಕ ಕುಂಡ್ಲಿಯಲ್ಲಿ ಸಂಭವಿಸಿರುವ 19ನೇ ಸಾವು ಇದಾಗಿದೆ.

ರೈತನ ಸಾವಿಗೆ ನಿಖರ ಕಾರಣ ತಿಳಿಯಲು ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಮೃತದೇಹವನ್ನು ಆಸ್ಪತ್ರೆಯ ಶವಾಗಾರದ ಫ್ರೀಝರ್ ನಲ್ಲಿ ಇಡಲಾಗಿತ್ತು. ಗುರುವಾರ ಮೃತದೇಹವನ್ನು ಫ್ರೀಝರ್ ನಿಂದ ಹೊರ ತೆಗೆದಾಗ ದೇಹವನ್ನು ಇಲಿ ತಿಂದಿರುವುದು ಕಂಡುಬಂದಿದೆ. 

ಘಟನೆಯ ತನಿಖೆಗಾಗಿ ನಾವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಅದರ ವರದಿಯ ಮೇರೆಗೆ ನಾವು ಕಾರ್ಯನಿರ್ವಹಿಸುತ್ತೇವೆ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಎಲ್ಲ ಅಧಿಕಾರಿಗಳ ಹೇಳಿಕೆಯನ್ನು ನಾವು ದಾಖಲಿಸಿದ್ದೇವೆ ಎಂದು ಆಸ್ಪತ್ರೆಯ ಪ್ರಧಾನ ವೈದ್ಯಕೀಯ ಅಧಿಕಾರಿ ಜೈ ಭಗವಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News